ADVERTISEMENT

ಸ್ವಚ್ಛತೆ ಕಾಣದ ಚಿಕ್ಕಲ್ಲೂರು

ಡಿ.ವೆಂಕಟಾಚಲ
Published 25 ಫೆಬ್ರುವರಿ 2015, 8:45 IST
Last Updated 25 ಫೆಬ್ರುವರಿ 2015, 8:45 IST
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದ ಬೀದಿಯಲ್ಲಿ ಕಸ ಎಸೆದಿರುವುದು
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದ ಬೀದಿಯಲ್ಲಿ ಕಸ ಎಸೆದಿರುವುದು   

ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಅನೈರ್ಮಲ್ಯ ತಾಣವಾಗಿ ಪರಿಣಮಿಸಿ ರೋಗಗಳ ಆವಾಸ ಸ್ಥಾನವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತವೆ. ಸಂಬಂಧಪಟ್ಟವರು ಈ ತ್ಯಾಜ್ಯ ವಿಲೇವಾರಿಗೆ ತಿರುಗಿಯೂ ನೋಡಿಲ್ಲ.

ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಗ್ರಾಮದಲ್ಲಿ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ನಾಲ್ಕೈದು ದಿನಗಳ ಕಾಲ ಭಕ್ತರು ಇಲ್ಲಿಯೇ ಮೊಕ್ಕಾಂ ಮಾಡಿದ್ದ ಕಾರಣ ಗ್ರಾಮದ ತುಂಬೆಲ್ಲಾ ತ್ಯಾಜ್ಯ ತುಂಬಿ ತುಳುಕುತ್ತದೆ. ಇದನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿಗೆ ಸಾಕಷ್ಟು ಹಣ ಇಲ್ಲ ಎಂದು ಕೈಚೆಲ್ಲಿದರೆ, ಇದಕ್ಕೆ ಸಂಬಂಧ ಪಟ್ಟ ದೇವಾಲಯದವರು ಈ ಕೆಲಸ ಗ್ರಾಮ ಪಂಚಾಯಿತಿಗೆ ಸೇರಿದ್ದು ಎಂದು ತೋರಿಸಿ ಸುಮ್ಮನಾಗಿದ್ದಾರೆ. ಇದರಿಂದಾಗಿ ಗ್ರಾಮದ ಜನತೆ ತ್ಯಾಜ್ಯದ ರಾಶಿ ನಡುವೆ ರೋಗರುಜಿನದ ಭಯದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ಇದೆ ಎಂದು ಮಹಿಳಾ ಸಂಘದ ಭಾರತಿ ದೂರಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ಟ್ರಸ್ಟ್‌ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸುಂಕ ವಸೂಲಾತಿ ಮಾಡಲಾಗುತ್ತದೆ. ಆದರೆ, ಜಾತ್ರೆಯ ನಂತರ ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಟ್ರಸ್ಟ್‌ ವತಿಯಿಂದ ಏನೂ ನೀಡಲಾಗುತ್ತಿಲ್ಲ. ಟ್ರಸ್ಟ್‌ ವತಿಯಿಂದ ಗ್ರಾಮದಲ್ಲಿ ಭಕ್ತರು ಅಡುಗೆ ಮಾಡಲು ನಿರ್ಮಿಸಿರುವ ಡಾರ್ಮೆಂಟರಿ ಕಾಮಗಾರಿ ಕಳಪೆಯಿಂದ ಕೂಡಿದ್ದು ಬಿರುಗಾಳಿಗೆ ನೆಲಕಚ್ಚಿದೆ. ಇದರ ಭಯದ ವಾತಾವರಣದಲ್ಲಿ ಭಕ್ತರು ಇಲ್ಲಿ ತಂಗಬೇಕಾದ ಸ್ಥಿತಿ ಇದೆ.

ಇತ್ತೀಚೆಗೆ ಎಚ್‌1ಎನ್‌1 ಜನರನ್ನು ಆತಂಕಕ್ಕೀಡುಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮದ ಸ್ವಚ್ಛತೆಗೆ ಮುಂದಾಗಬೇಕು. ಅಲ್ಲದೆ, ಗ್ರಾಮದ ಅಭಿವೃದ್ಧಿಗೆ ಮತ್ತು ಜನತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಪುಟ್ಟೇಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.