ADVERTISEMENT

ಹನೂರು ತಾಲ್ಲೂಕು ರಚನೆಗೆ ಬದ್ಧ

ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:54 IST
Last Updated 15 ಜೂನ್ 2013, 6:54 IST

ಚಾಮರಾಜನಗರ: `ಹನೂರು ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡುವುದೇ ದಿ.ಜಿ. ರಾಜೂಗೌಡ ಅವರ ಕನಸಾಗಿತ್ತು. ಅದನ್ನು ಈಡೇರಿಸಲು ನಾನು ಬದ್ಧ' ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹನೂರು ಪಟ್ಟಣದ ಕ್ರೀಡಾಂಗಣದಲ್ಲಿ ಶುಕ್ರವಾರ ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಸಚಿವರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದಿನ ಸರ್ಕಾರ ತರಾತುರಿಯಲ್ಲಿ 43 ತಾಲ್ಲೂಕು ರಚನೆ ಘೋಷಿಸಿತ್ತು. ಇದರ ಹಿಂದೆ ವಿಧಾನಸಭಾ ಚುನಾವಣೆಯ ತಂತ್ರಗಾರಿಕೆ ಅಡಗಿತ್ತು. ಪ್ರತಿ ತಾಲ್ಲೂಕು ರಚನೆಗೆ ರೂ 100 ಕೋಟಿ ಅನುದಾನ ಬೇಕಿದೆ. ಬಜೆಟ್‌ನಲ್ಲಿ ಸರ್ಕಾರ ಮೀಸಲಿಟ್ಟಿರುವುದು ಕೇವಲ ರೂ 200 ಕೋಟಿ ಎಂದರು.

ರಾಜ್ಯ ಸರ್ಕಾರ ಹೊಸ ತಾಲ್ಲೂಕು ರಚನೆಗೆ ಬದ್ಧವಾಗಿದೆ. ಈ ಸಂಬಂಧ ಆಯಾ ಕ್ಷೇತ್ರದ ಶಾಸಕರು, ತಹಶೀಲ್ದಾರ್, ಸಂಘ-ಸಂಸ್ಥೆಗಳ ಸಲಹೆ ಪಡೆಯಲಾಗುತ್ತಿದೆ. ಆ ನಂತರ ಯಾವುದೇ ಗೊಂದಲ ಇಲ್ಲದೆ ಹೊಸ ತಾಲ್ಲೂಕುಗಳನ್ನು ರಚನೆ ಮಾಡುತ್ತೇವೆ. ತಾಲ್ಲೂಕು ರಚನೆಗೆ ನೇಮಿಸಿದ್ದ 4 ಸಮಿತಿಗಳು ಕೂಡ ಹನೂರಿಗೆ ಹೊಸ ತಾಲ್ಲೂಕಿನ ಸ್ಥಾನಮಾನ ನೀಡಬೇಕೆಂದು ವರದಿ ಸಲ್ಲಿಸಿವೆ. ಹೀಗಾಗಿ, ಈ ಭಾಗದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ರಾಜೂಗೌಡ ಅಭಿವೃದ್ಧಿಗೆ ಮಾದರಿಯಾಗಿದ್ದಾರೆ. ಅವರಿಗೆ ಕ್ಷೇತ್ರದ ಬಗ್ಗೆ ಇದ್ದ ಕಾಳಜಿ ಅನುಕರಣೀವಾದುದು. ಈಗಿನ ಎಲ್ಲ ಶಾಸಕರು ಅಂತಹ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಬಳ್ಳಾರಿಯ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ಗಳಿಸಿದ್ದ ಆದಾಯದಿಂದ ಬಿಜೆಪಿ ಸರ್ಕಾರ ರಚಿಸಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆತ ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಬಗ್ಗೆಯೂ ಸಿಬಿಐ ವರದಿ ಹೇಳುತ್ತಿವೆ. ಬಿಜೆಪಿ ಈಗ ಮೂರು ಭಾಗವಾಗಿ ಛಿದ್ರವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಲು ಮತದಾರರು ಮನಸ್ಸು ಮಾಡಿಲ್ಲ. ಮತದಾರರು ನಮ್ಮ ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ. ಅವರ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಣಿ, ಉಪಾಧ್ಯಕ್ಷ ನಂಜೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ರಾಮಾಪುರ ಬ್ಲಾಕ್ ಅಧ್ಯಕ್ಷ ಎನ್. ಕಾಮರಾಜು, ಹನೂರು ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಈಶ್ವರ್, ದೇವರಾಜು, ಕೆ. ಮಹದೇವ, ಶಿವಮ್ಮ, ಲೋಕಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ಕೆರೆಹಳ್ಳಿ ನವೀನ್, ಮುಖಂಡರಾದ ಸದಾಶಿವಮೂರ್ತಿ, ರತ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.