ADVERTISEMENT

ಹಿಂದುಳಿದ ವರ್ಗಗಳ ಬಡಾವಣೆ ಅಭಿವೃದ್ಧಿಗೆ ಹೆಚ್ಚು ಒತ್ತು–ಶಾಸಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 5:46 IST
Last Updated 27 ಅಕ್ಟೋಬರ್ 2017, 5:46 IST

ಸಂತೇಮರಹಳ್ಳಿ: ಹಿಂದುಳಿದ ವರ್ಗಗಳ ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಅನುದಾನ ನೀಡುತ್ತಿದೆ ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು.
ಸಮೀಪದ ಇರಸವಾಡಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಉಪ್ಪಾರ ಬಡಾವಣೆಗಳು ತೀರಾ ಹಿಂದುಳಿದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದೆ. ಜತೆಗೆ ಬಡಾವಣೆಯ ನಿವಾಸಿಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಬೇಕು. ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಉಪ್ಪಾರ ಸಮುದಾಯದವರು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಅಂಥ ಗ್ರಾಮಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಇರಸವಾಡಿ ಹಾಗೂ ಸುತ್ತೂರು ಗ್ರಾಮಗಳಲ್ಲಿ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿದ್ದರು. ಈ ನಿಟ್ಟಿನಲ್ಲಿ ಶಾಸಕರ ಅನುದಾನದಲ್ಲಿ ₹20 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಸಹಕಾರ ಪಡೆದು ಕಾಮಗಾರಿಯನ್ನು ಆರಂಬಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ಮಾಜಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಸದಸ್ಯೆ ಶಿವಮ್ಮ,
ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಸದಸ್ಯರಾದ ಪಿ. ಸುಜಾತ, ಶಿವಶಂಕರ್, ರಂಗಸ್ವಾಮಿ, ನಾಗಶೆಟ್ಟಿ, ಮುಖಂಡರಾದ ಜಯರಾಜು, ಸುರೇಶ್, ಡಿ. ನಾಗರಾಜು, ಎಇಇ ಚಿದಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.