ADVERTISEMENT

ಹ್ಯಾಟ್ರಿಕ್ ಸಾಧಿಸಿದ ಹನೂರು ಶೈಕ್ಷಣಿಕ ವಲಯ

ಎಸ್‌ಎಸ್‌ಎಲ್‌ಸಿ ಫಲಿತಾಂಶ; ರಾಜ್ಯದಲ್ಲಿ 22ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ಮೇ 2018, 9:50 IST
Last Updated 8 ಮೇ 2018, 9:50 IST

ಹನೂರು: ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಎರಡು ಭಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದ ಹನೂರು ಶೈಕ್ಷಣಿಕ ವಲಯ ಈ ಬಾರಿಯೂ ಅದೇ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ ಕೀರ್ತಿಗೆ ಭಾಜನವಾಗಿದೆ.

ಬಹುತೇಕ ಗುಡ್ಡಗಾಡು ಪ್ರದೇಶದಿಂದಲೇ ಆವೃತವಾಗಿರುವ ಹನೂರು ತಾಲ್ಲೂಕಿನ ಈ ಶೈಕ್ಷಣಿಕ ಸಾಧನೆ ರಾಜ್ಯದ ಗಮನ ಸೆಳೆದಿದೆ. 2016ರಲ್ಲಿ ಶೇ 86.62, 2017ರಲ್ಲಿ ಶೇ 86.88, 2018ರಲ್ಲಿ ಶೇ 88.79 ಫಲಿತಾಂಶ ಪಡೆದಿದೆ. ಆದರೆ, ಕಳೆದ ವರ್ಷ ರಾಜ್ಯದ 205 ಶೈಕ್ಷಣಿಕ ವಲಯಗಳ ಪೈಕಿ 8ನೇ ಸ್ಥಾನ ಪಡೆದಿದ್ದ ಹನೂರು ಶೈಕ್ಷಣಿಕ ವಲಯ ಈ ಬಾರಿ 22ನೇ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಪರೀಕ್ಷೆ ಬರೆದ 1820 ವಿದ್ಯಾರ್ಥಿಗಳ ಪೈಕಿ 1616 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 38 ಶಾಲೆಗಳ ಪೈಕಿ ಕೌದಳ್ಳಿ ಸರ್ಕಾರಿ ಪ್ರೌಢಶಾಲೆ, ಪೊನ್ನಾಚಿಯ ಸಾಲೂರು ಕೃಪಾಪೋಷಿತ ಶಾಲೆ, ರಾಮಾಪುರ ಸರ್ಕಾರಿ ಬಾಲಕಿಯರ ಶಾಲೆ, ಮಾರ್ಟಳ್ಳಿಯ ಸಂತ ಮೇರಿಸ್‌ ಆಗ್ಲಶಾಲೆ, ತೋಮಿಯಾರ್‌ಪಾಳ್ಯ ಸಂಥ ಥಾಮಸ್‌ ಶಾಲೆ ಸೇರಿ ಐದು ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. 16 ಶಾಲೆಗಳು ಶೇ 90ರಷ್ಟು ಫಲಿತಾಂಶ ಪಡೆದಿವೆ.

ADVERTISEMENT

‘ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಶಾಲಾ ಮಟ್ಟದಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆಯನ್ನು ಎದುರಿಸುವ ನೈಪುಣ್ಯತೆ, ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರ ಬರೆಯುವುದು, ಎಷ್ಟು ಅಂಕದ ಪ್ರಶ್ನೆಗಳಿಗೆ ಯಾವ ಮಟ್ಟದಲ್ಲಿ ಉತ್ತರ ಬರೆಯುವುದರ ಬಗ್ಗೆ ತರಬೇತಿ ನೀಡಲಾಗಿತ್ತು. ಅಲ್ಲದೇ ಇಲಾಖೆ ವತಿಯಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಬಳಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ವಿಷಯವಾರರು ಕಂಠ ಪಾಠ ಪದ್ಯಗಳು ಮತ್ತು ಗಣಿತ ಸೂತ್ರಗಳನ್ನು ಬರೆದು ಪುನರ್‌ಮನನ ಮಾಡಿ ದೀರ್ಘಕಾಲ ನೆನೆಪಿನಲ್ಲಿಟ್ಟುಕೊಳ್ಳುವ ಕೌಶಲವನ್ನು ಬೆಳೆಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಂಡಿದ್ದರ ಪರಿಣಾಮ ಈ ಬಾರಿಯೂ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ  ಬಿಆರ್‌ಪಿ ಶ್ರೀನಿವಾಸ್‌ ನಾಯ್ಡು.

‘ವಿದ್ಯಾರ್ಥಿಗಳನ್ನು ವಿಂಗಡಿಸಿ ಗುಂಪು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಮಧ್ಯಾಹ್ನ ಊಟದ ನಂತರ, ವಿದ್ಯಾರ್ಥಿಗಳಿಗೆ ಇಷ್ಟವಾಗುವ ಎರಡು ಪ್ರಶ್ನೆಗಳಿಗೆ ಉತ್ತರಿಸಿ ಆಯಾ ವಿಷಯದ ಶಿಕ್ಷಕರ ಬಳಿ ತೋರಿಸಿ ಮೌಲ್ಯಮಾಪನ ಮಾಡಿಕೊಳ್ಳುವುದು. ಪ್ರತಿನಿತ್ಯ ವಿದ್ಯಾರ್ಥಿಯೂ ಇದನ್ನು ಚಾಚೂತಪ್ಪದೇ ಮಾಡುತ್ತಿದ್ದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಯಿತು. ಆಗಸ್ಟ್‌ನಿಂದ ಪ್ರಾರಂಭವಾದ ಈ ಪ್ರಯೋಗ ಪರೀಕ್ಷೆ ದಿನದವರೆಗೂ ಮುಂದುವರೆಸಿಕೊಂಡು ಬಂದೆವು. ಇದರಿಂದ ನಮ್ಮ ಶಾಲೆಗೆ ಶೇ 100ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು’ ಎಂದು ರಾಮಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್‌.ಶಂಭಯ್ಯ ಶಾಲೆ ಸಾಧನೆಯ ಗುಟ್ಟನನು ಬಿಚ್ಚಿಟ್ಟರು.

‘ಭಾನುವಾರ, ಶನಿವಾರ ಹಾಗೂ ರಜಾ ದಿನಗಳಲ್ಲಿ ವಿಶೇಷ ಪರಿಣಿತ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕ್ಲಿಷ್ಟವೆನಿಸಿದ ವಿಜ್ಞಾನ ಪ್ರಾಯೋಗಿಕ ಪಾಠ, ಇಂಗ್ಲಿಷ್ ವ್ಯಾಕರಣ ಬೋಧನೆ,  ನಿರಂತರ ಹಾಗೂ ಮೌಲ್ಯಮಾಪನದಡಿಯಲ್ಲಿ ಚಟುವಟಿಕೆಯಾಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಐದು ಸರ್ಕಾರಿ ಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಗುಣಮಟ್ಟದ ಫಲಿತಾಶ ಪಡೆಯುವ ನಿಟ್ಟಿನಲ್ಲಿ ಪ್ರಜ್ವಲ, ಪ್ರಕಾಶ ಹಾಗೂ ಪ್ರವೀಣ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ವಿಶೇಷ ಗಮನ ಹರಿಸಿದ ಪರಿಣಾಮ ಇಂದು ಹ್ಯಾಟ್ರಿಕ್‌ ಸಾಧನೆ ಮಾಡಲು ಸಾಧ್ಯವಾಯಿತು’ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್‌.ಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.