ADVERTISEMENT

‘ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 10:36 IST
Last Updated 11 ಮಾರ್ಚ್ 2014, 10:36 IST

ಯಳಂದೂರು: ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಯಬಿಟ್ಟು ಆತ್ಮವಿಶ್ವಾಸದಿಂದ ಪ್ರಾಮಾಣಿಕ ಪ್ರಯತ್ನದಿಂದ ಪರೀಕ್ಷೆ ಎದುರಿಸಿದರೆ ಒಳ್ಳೆಯ ಅಂಕಗಳಿಸುವುದು ಸುಲಭವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಮಂಜುನಾಥ್‌ ಸಲಹೆ ನೀಡಿದರು.

ಅವರು ಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ’ಮಕ್ಕಳೆ ಪರೀಕ್ಷೆಗೆ ಸಿದ್ಧರಾಗಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ಯಳಂದೂರು ಸತತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಾ ಬಂದಿದೆ. ಈಗಾಗಲೇ ಮಕ್ಕಳನ್ನು ಇದಕ್ಕಾಗಿ ಅಣಿಗೊಳಿಸುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ಈ ಬಾರಿ ತಾಲ್ಲೂಕಿನ 18 ಪ್ರೌಢಶಾಲೆಯ 835 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸನ್ನದ್ಧರಾಗಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಪಟ್ಟಣ ಹಾಗೂ ಗೌಡಹಳ್ಳಿ ಗ್ರಾಮದ ಜೆಎಸ್‌ಎಸ್‌ ಪ್ರೌಢಶಾಲೆಗಳು ಸೇರಿದಂತೆ ಮೂರು ಕೇಂದ್ರಗಳಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಬಾಲ ವಿಕಾಸ ಅಕಾಡೆಮಿಯ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಪಾಲನೆ ಕಡೆ ಹೆಚ್ಚಿನ ಗಮನ ನೀಡಬೇಕು. ಇದು ಸಾಧನೆಗೆ ಮಾನದಂಡವಾಗಲಿದೆ. ಇದರ ಜೊತೆಗೆ ಸತತ ಪರಿಶ್ರಮದಿಂದ ಅಭ್ಯಾಸ ನಡೆಸಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸಲಹೆ ನೀಡಿದರು.

ಅಕಾಡೆಮಿಯ ಪದ್ಮಾ ಪುರುಷೋತ್ತಮ್‌, ಬಿಆರ್‌ಸಿ ರಾಜಪ್ಪ ಮಾತನಾಡಿದರು. ಸಿಡಿಪಿಒ ನಾಗೇಶ್‌, ಬಿಆರ್‌ಪಿ ಎನ್‌. ದೊರೆಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ್‌, ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರಸ್ವಾಮಿ, ಗೋವಿಂದರಾಜು, ಮಹಾದೇವ್‌, ನಾಗೇಶ್‌, ವಾಸುಕಿ, ಮುದ್ದುಬಸವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.