ADVERTISEMENT

‘ಪ್ರವಾಸಿ ಕೇಂದ್ರವಾಗಿ ಯಳಂದೂರು ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:33 IST
Last Updated 6 ಮಾರ್ಚ್ 2014, 6:33 IST

ಯಳಂದೂರು: ಪಟ್ಟಣವನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾಗಿ ಹಾಗೂ ರಾಜ್ಯ ಸಹಕಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ತಿಳಿಸಿದರು.

ಪಟ್ಟಣದಲ್ಲಿ ನವೀಕೃತಗೊಂಡ ಐತಿಹಾಸಿಕ ಜಹಗೀರ್‌್ದಾರ್ ಬಂಗಲೆಯಲ್ಲಿ ಆರಂಭಗೊಂಡಿರುವ ಜಿಲ್ಲೆಯ ಪ್ರಥಮ ದಿವಾನ್‌ ಪೂರ್ಣಯ್ಯ ವಸ್ತುಸಂಗ್ರಹಾಲಯವನ್ನು ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಜಿಲ್ಲೆಯ ಎಲ್ಲಾ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಗೌರೇಶ್ವರ ದೇಗುಲ, ಬಳೇಮಂಟಪ, ವರಹಾಸ್ವಾಮಿ ದೇಗುಲಗಳು ಒಂದೇ ಕಡೆ ಇರುವುದರಿಂದ ಇದು ಒಳ್ಳೆ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳೂ ಇದ್ದು ಇದರ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ₨ 1.50 ಕೋಟಿ ವೆಚ್ಚದಲ್ಲಿ ಜಹಗೀರ್‌್ದಾರ್‌ ಬಂಗಲೆಯನ್ನು ನವೀಕರಿಸಲಾಗಿದೆ. ಇದನ್ನು 2009 ನೇ ಸಾಲಿನಲ್ಲಿ ಪಟ್ಟಣದಲ್ಲಿದ್ದ ಇಂತಹ ಪ್ರಾಚೀನ ಕಟ್ಟಡವನ್ನು ಗುರುತಿಸಿ ವಸ್ತುಸಂಗ್ರಹಾಲಯ ಮಾಡುವ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು. ರಾಜ್ಯದ ಶ್ರೇಷ್ಠ ವಸ್ತುಸಂಗ್ರಹಾಲಯಗಳಲ್ಲಿ ಇದನ್ನು ಒಂದು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಚಿತ್ರ ಕಲಾವಿದ ದುಂಡುಮಹದೇವಸ್ವಾಮಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ದಾಸಯ್ಯನ ಚಿತ್ರ ವಸ್ತುಸಂಗ್ರಹಾಲಯದಲ್ಲಿ ಇಡಲು ಕೊಡುಗೆಯಾಗಿ ನೀಡಿದರು.

ಶಾಸಕ ಎಸ್‌. ಜಯಣ್ಣ, ಜಿ.ಪಂ. ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ಸದಸ್ಯರಾದ ಕೇತಮ್ಮ, ಸಿದ್ದರಾಜು, ತಾ.ಪಂ. ಅಧ್ಯಕ್ಷೆ ಗಂಗಾಮಣಿರೇವಣ್ಣ, ಉಪಾಧ್ಯಕ್ಷ ಎನ್‌. ಮಹೇಶ್‌ಕುಮಾರ್‌, ಸದಸ್ಯರಾದ ಉಮಾವತಿ ಸಿದ್ದರಾಜು, ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ, ಇಲಾಖೆಯ ಕೆ. ದೊರೆರಾಜು, ಎಂ. ದೊರೆರಾಜು, ಎಚ್‌.ಟಿ. ತಳವಾರ್, ವಡಗೆರೆದಾಸ್‌, ಯೋಗೇಶ್‌, ಕಿನಕಹಳ್ಳಿ ರಾಚಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.