ADVERTISEMENT

‘ಬಸ್‌ನಿಲ್ದಾಣಕ್ಕೆ ಚಾಮರಾಜ ಒಡೆಯರ ಹೆಸರಿಡಿ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 9:10 IST
Last Updated 7 ಡಿಸೆಂಬರ್ 2013, 9:10 IST

ಚಾಮರಾಜನಗರ: ‘ಜಿಲ್ಲಾ ಕೇಂದ್ರವು ಚಾಮರಾಜ ಒಡೆಯರು ಹುಟ್ಟಿದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಚಾಮರಾಜ ಒಡೆಯರ ಬಸ್‌ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ನಗರಸಭೆ ಸದಸ್ಯ ಸೈಯದ್ ಆರೀಫ್‌ ಒತ್ತಾಯಿಸಿದರು.

ನಗರದ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗ ಈಚೆಗೆ ನಡೆದ ದ್ವಿಚಕ್ರವಾಹನಗಳ ನಿಲುಗಡೆ ತಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಾಮರಾಜ ಒಡೆಯರ ನೆನಪಿಗಾಗಿ ಅವರ ಹೆಸರು ನಾಮಕರಣ ಮಾಡುವುದು ಸೂಕ್ತ. ಜಿಲ್ಲೆಯಾಗಿ 17 ವರ್ಷ ಕಳೆದಿದ್ದರೂ ಇನ್ನೂ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಸಾರಿಗೆ ಬಸ್‌ ಸೌಲಭ್ಯವಿಲ್ಲ. ಅಗತ್ಯ ಬಸ್‌ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಸ್‌ನಿಲ್ದಾಣದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶವಿರಲಿಲ್ಲ. ಇದರಿಂದ ಸರ್ಕಾರಿ ನೌಕರರು ಹಾಗೂ ಹಳ್ಳಿಗಳಿಂದ ಬರುವ ಪ್ರಯಾಣಿಕರು, ಹೊರರಾಜ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮದ ಅಧಿಕಾರಿಗಳು ನಿಲ್ದಾಣದ ಮುಂಭಾಗ ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಕೋರಿದರು.

ವೃತ್ತ ನಿರೀಕ್ಷಕ ಗೋವಿಂದರಾಜು ಮಾತನಾಡಿ, ನಿಲ್ದಾಣದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ. ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈಗ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದರು.

ಎಪಿಎಂಸಿ ನಿರ್ದೇಶಕ ಎಲ್. ಸುರೇಶ್ ಪ್ರಾಸ್ತಾವಿಕ ಮಾತನಾಡಿದರು.

ಕೆಎಸ್ಆರ್‌ಟಿಸಿ ಅಧಿಕಾರಿಗಳಾದ ಶಿವಮೂರ್ತಿ, ಕುಮಾರ್, ಪರಮೇಶ್ವರಪ್ಪ, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಬಸವರಾಜು, ಎಪಿಎಂಸಿ ಸದಸ್ಯ ಪುರುಷೋತ್ತಮ್, ಶಿವಕುಮಾರ್, ಗಿರೀಶ್, ಸಿ.ಎನ್. ಗೋವಿಂದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.