ADVERTISEMENT

‘ಸಮಸ್ಯೆ ನಿರ್ಮೂಲನೆಗೆ ಸಂಘಟನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:52 IST
Last Updated 24 ಡಿಸೆಂಬರ್ 2013, 7:52 IST

ಚಾಮರಾಜನಗರ: `ರೈತರು ಸಂಘಟಿತರಾಗಿ ಕೃಷಿ ಇಲಾಖೆಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆ ಮೂಲಕ ಕೃಷಿ ಸಮಸ್ಯೆ ಕುರಿತು ಚರ್ಚಿಸಿ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು' ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ತಾಲ್ಲೂಕು ಕೃಷಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆಯಲ್ಲಿ  ಮಾತನಾಡಿದರು.

ಗಡಿ ಜಿಲ್ಲೆಯು ಮಳೆಯಾಶ್ರಿತ ಪ್ರದೇಶವಾಗಿದೆ. ಹೀಗಾಗಿ, ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಇಲಾಖೆಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಎಲ್ಲ ರೈತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ಜಿಲ್ಲಾಮಟ್ಟದ ಸಮಸ್ಯೆ ಮುಂದಿಟ್ಟು ಸರ್ಕಾರದ ಗಮನ ಸೆಳೆಯಬಹುದು' ಎಂದು ಹೇಳಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್. ಹೊನ್ನದಾಸೇಗೌಡ ಮಾತನಾಡಿ, `ದಿ.ಚರಣ್‌ಸಿಂಗ್ ದಾಸ್ ಅವರ ಜನ್ಮ ದಿನವನ್ನು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ರೈತರ ಪರ ಹೋರಾಟ ಮಾಡಿದ ದಾರ್ಶನಿಕರ ಸ್ಮರಣೆಯಿಂದ ಎಲ್ಲ ರೈತರು ಒಂದೆಡೆ ಸೇರಿ ಸಮಸ್ಯೆ ಕುರಿತು ಚರ್ಚಿಸುವಂತಾಗಬೇಕು' ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ನಾಗಶ್ರೀ ಮಾತನಾಡಿ, `ರೈತರು ನೂತನ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಇಲಾಖೆಯಿಂದ ನಡೆಯುವ ತರಬೇತಿ ಕಾರ್ಯಕ್ರಮಗಳಲ್ಲಿ ರೈತರು ಆಸಕ್ತಿಯಿಂದ ಪಾಲ್ಗೊಂಡು ಕೃಷಿಯಲ್ಲಿನ ವಿಫಲತೆಯನ್ನು ಸರಿದೂಗಿಸಿಕೊಳ್ಳಬೇಕು. ಆ ಮೂಲಕ ಪ್ರಗತಿಪರ ರೈತರಾಗಬೇಕು' ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ ಮಾತನಾಡಿ, `ಸಾಲ ಹಾಗೂ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಅಂತಹ ರೈತರ ಕುಟುಂಬಗಳು ಹಲವು ತೊಂದರೆ ಎದುರಿಸುತ್ತಿವೆ. ರೈತರು ಧೃತಿಗೆಡಬಾರದು. ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ರೈತರೇ ದೇಶದ ಬೆನ್ನೆಲುಬು. ಈ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರಗಳು ರೈತರನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, `ಪ್ರಸ್ತುತ ರೈತರ ಸ್ಥಿತಿ ಚಿಂತಾಜನಕವಾಗಿದೆ. ಬೆಳೆ ರಕ್ಷಣೆಗೆ ಪರದಾಡುವಂತಾಗಿದೆ. ವಿಶ್ವ ವಾಣಿಜ್ಯ ಒಪ್ಪಂದದ ಪ್ರಭಾವದಿಂದ 2 ಸಾವಿರ ವಿದೇಶಿ ಕಂಪೆನಿಗಳು ದೇಶಕ್ಕೆ ನುಸುಳುತ್ತಿವೆ. ಕೃಷಿ ಭೂಮಿ ಉಳಿಸಿಕೊಳ್ಳಲಾಗದೆ ರೈತರು ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರದ ಜವಾಬ್ದಾರಿಯೂ ಈಗ ಹೆಚ್ಚಿದೆ ಎಂದು ಹೇಳಿದರು.

ಕೃಷಿ ಇಲಾಖೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಕ್ಕಣೆ ಕಣ ನಿರ್ಮಾಣಕ್ಕೆ ಅವಕಾಶವಿದೆ. ಆದರೆ, ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ಆಹಾರ ಪದಾರ್ಥಗಳಿಗೆ ವಿಷಕಾರಿ ವಸ್ತುಗಳು ಮೆತ್ತಿಕೊಳ್ಳುತ್ತಿವೆ ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಆರ್. ಮಹದೇವ್, ಪದ್ಮಾ ಚಂದ್ರು, ಚಿಕ್ಕಮಹದೇವು, ಸಿದ್ದರಾಜು, ಮಹೇಶ್, ಜಡೇಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಉಪಾಧ್ಯಕ್ಷ ಶಾಂತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.