ADVERTISEMENT

ಕೊಳ್ಳೇಗಾಲ: ಅಕ್ರಮ ಮದ್ಯ ಮಾರಿದರೆ ₹ 10 ಸಾವಿರ ದಂಡ

ಸಿದ್ದಯ್ಯನಪುರ ಗ್ರಾಮಸ್ಥರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 14:24 IST
Last Updated 8 ನವೆಂಬರ್ 2020, 14:24 IST
ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಹಲವು ಕಡೆಗಳಲ್ಲಿ ಗೋಡೆಗೆ ಅಕ್ರಮ ಮದ್ಯ ಮಾರಾಟ ಮಾಡಿದರೆ ದಂಡ ಎಂದು ಪ್ರಕಟಣೆ ಅಂಟಿಸಿದ್ದಾರೆ
ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಹಲವು ಕಡೆಗಳಲ್ಲಿ ಗೋಡೆಗೆ ಅಕ್ರಮ ಮದ್ಯ ಮಾರಾಟ ಮಾಡಿದರೆ ದಂಡ ಎಂದು ಪ್ರಕಟಣೆ ಅಂಟಿಸಿದ್ದಾರೆ   

ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ ₹ 10 ಸಾವಿರ ದಂಡ, ಮಾರುವವರ ಪತ್ತೆ ಹಚ್ವಿಕೊಟ್ಟವರಿಗೆ ₹ 5 ಸಾವಿರ ಬಹುಮಾನವನ್ನು ನೀಡಲಾಗುವುದು ಎಂದು ಇಲ್ಲಿನ ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.

ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬೀದಿಯಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನರು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿ ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಯುವಕರ ಸಂಘದ ದೂರಿನನ್ವಯ ಗ್ರಾಮದಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನ ಚಾಮರಾಜು, ಲಕ್ಷ್ಮಣ ಸ್ವಾಮಿ, ಧರ್ಮರತ್ನಾಕರ, ಕಾಂತರಾಜು, ಮಾದಯ್ಯ, ಮಹೇಂದ್ರ, ಶ್ರೀನಿವಾಸ್, ಎಂ.ಮಹದೇವ, ಸಿ.ಎಂ.ಮಹದೇವ, ಲಿಂಗರಾಜು, ದೊರೆಸ್ವಾಮಿ ಸೇರಿ ಇತರರು ಸಭೆ ಸೇರಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಆಗೊಂದು ವೇಳೆ ನಿಷೇಧ ತೀರ್ಮಾನ ಉಲ್ಲಂಘಿಸಿ ಅಕ್ರಮವಾಗಿ ಮನೆಯಲ್ಲಿ, ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರಿಗೆ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಜಗಳ ಮಾಡಿದವರಿಗೆ ₹ 5 ಸಾವಿರ ದಂಡ ಹಾಗೂ ಮಾಲು ಸಮೇತ ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ₹ 5 ಸಾವಿರ ಬಹುಮಾನ ಘೋಷಣೆ ಮಾಡಿ ಲಿಖಿತ ಪ್ರಕಟಣೆ ಹೊರಡಿಸಿದ್ದಾರೆ.

ADVERTISEMENT

ಈ ಕುರಿತು ಪ್ರಕಟಣೆಯನ್ನು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಹಳೆ ಹಾಗೂ ಹೊಸ ಬಡಾವಣೆಗಳ ಹಲವು ಕಡೆಗಳಲ್ಲಿ ಹತ್ತಾರು ಕಡೆಗಳಲ್ಲಿ ಗೋಡೆಗೆ ಅಂಟಿಸಿದ್ದಾರೆ. ಗ್ರಾಮದ ವಿವಿಧ ಸಮುದಾಯದ ಬೀದಿಗಳ ಜನತೆಯಲ್ಲದೆ, ನೆರೆ ಗ್ರಾಮಗಳಲ್ಲಿ ಈ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.