ADVERTISEMENT

ಚಾಮರಾಜನಗರ | ಕಾವೇರಿ ಹೋರಾಟಕ್ಕೆ 100 ದಿನ: ಕಡ್ಲೆಪುರಿ ತಿಂದು, ಚಹಾ ಕುಡಿದು ಧರಣಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 11:34 IST
Last Updated 14 ಡಿಸೆಂಬರ್ 2023, 11:34 IST
   

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಹಾಗೂ ಇತರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 100ನೇ ದಿನಕ್ಕೆ ಕಾಲಿಟ್ಟಿದೆ. 

100ನೇ ದಿನದ ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು ಮಾತ್ರವಲ್ಲದೆ ರೈತ ಸಂಘ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳೂ ಪಾಲ್ಗೊಂಡರು. 

ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರ ಇಟ್ಟು ಧರಣಿ ಕುಳಿತ ‍ಪ್ರತಿಭಟನಕಾರರು, ಕಡ್ಲೆಪುರಿ, ಕಡಲೆಕಾಯಿ ತಿಂದು, ಅಲ್ಲೇ ಚಹಾ ಮಾಡಿ ಕುಡಿಯುವ ಮೂಲಕ ಪ್ರತಿಭಟನೆ ನಡೆಸಿದರು. 

ADVERTISEMENT

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ, ರೈತ, ತಮಿಳು ಸಂಘಟನೆಗಳು, ದಲಿತ –ಪ್ರಗತಿಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಸೇರಿ ಸತತವಾಗಿ 100 ದಿನದಿಂದ ಹೋರಾಟ ಮಾಡಲಾಗುತ್ತಿದೆ. ದಿನಕ್ಕೊಂದು ರೀತಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗುತ್ತಿದೆ’ ಎಂದರು. 

‘ರಾಜ್ಯದ ಜಲಾಶಯಗಳು ಬಹುತೇಕ ಬತ್ತಿ ಹೋಗಿವೆ. ಕರ್ನಾಟಕದಲ್ಲಿ ನೀರು ಇಲ್ಲ.  ತಮಿಳುನಾಡಿನ ಜೊತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳಲು ನಮ್ಮ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇದರಿಂದ ರಾಜ್ಯದ ಜನತೆ, ರೈತರಿಗೆ ತೊಂದರೆಯಾಗುತ್ತದೆ. ತಕ್ಷಣವೇ ನೀರು ನಿಲ್ಲಿಸದಿದ್ದರೆ, ಸರ್ಕಾರಕ್ಕೆ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

‘ರಾಜ್ಯದ ಸಂಸದರು, ಕೇಂದ್ರ ಸಚಿವರು ಕಾವೇರಿ ವಿಚಾರದಲ್ಲಿ ಇದುವರೆಗೂ ಮಾತನಾಡಿಲ್ಲ. ಮುಂದೆಯೂ ಕಾವೇರಿ ನೀರಿನ ವಿಚಾರದಲ್ಲಿ ಮಾತನಾಡದಿದ್ದರೆ ಎಲ್ಲರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ’ ಎಂದು ಕಿಡಿ ಕಾರಿದರು.

‘ಕಾವೇರಿ ನೀರಿನ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಒಬ್ಬ ಶಾಸಕನೂ ಮಾತನಾಡಿಲ್ಲ. ಕೆಲವೇ ತಿಂಗಳಲ್ಲಿ ಇವರು ರಾಜ್ಯ ಸರ್ಕಾರವನ್ನೇ ಗಿರವಿಗೆ ಇಡುತ್ತಾರೆ. ಬರಗಾಲ ಬರುತ್ತದೆ. ರಾಜ್ಯದ ಜನತೆ ಗುಳೆ ಹೋಗಬೇಕಾಗುತ್ತದೆ. ಮುಂದೆ ರಾಜ್ಯದ ಜನರಿಗೆ ಕಡ್ಲೆಪುರಿ ಸಿಗದಿರುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು’ ಎಂದು ಶ್ರೀನಿವಾಸ ಗೌಡ ಹೇಳಿದರು.  

‘ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸುವ ತನಕ ನಿರಂತರ ಹೋರಾಟ ಮಾಡಲಾಗುತ್ತಿದೆ. ಸರ್ಕಾರ ನಿಲುವು ಖಂಡಿಸಿ ಬೆತ್ತಲೆ ಚಳವಳಿ ನಡೆಸಲೂ ನಾವು ಸಿದ್ಧ’ ಎಂದು ಅವರು ಎಚ್ಚರಿಸಿದರು.  

ಪಣ್ಯದಹುಂಡಿ ರಾಜು, ಮಹೇಶ್‌ಗೌಡ, ಗು.ಪುರುಷೋತ್ತಮ್, ಸಿ.ಕೆ.ಮಂಜುನಾಥ್, ಸಿ.ಎಂ.ಕೃಷ್ಣಮೂರ್ತಿ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಬಸವಣ್ಣ, ಚಿನ್ನಸ್ವಾಮಿಗೌಂಡರ್, ಉಡಿಗಾಲ ಕುಮಾರಸ್ವಾಮಿ, ತಮಿಳು ಸಂಘದ ಜಗದೀಶ್, ನಿಜಧ್ವನಿ ಗೋವಿಂದರಾಜು, ರಾಮಸಮುದ್ರ ಸುರೇಶ್, ಚಾ.ರಾ.ಕುಮಾರ್, ಚಾ.ಹ.ರಾಮು, ರವಿಚಂದ್ರಪ್ರಸಾದ್, ಚಾ.ಸಿ.ಸಿದ್ದರಾಜು, ಪ್ರಶಾಂತ್, ತಾಂಡವಮೂರ್ತಿ, ವೀರಭದ್ರ, ರಾಚಪ್ಪ, ಲಿಂಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.