ಕೊಳ್ಳೇಗಾಲ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಂಬರ್ ಪ್ಲೇಟ್ ಇಲ್ಲದೆ ನಿಯಮಬಾಹಿರವಾಗಿ ವಾಹನಗಳನ್ನು ಚಾಲನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳ ಬಳಕೆಯಿಂದ ಅಪಘಾತ ಹಾಗೂ ಅಪರಾಧ ಕೃತ್ಯಗಳ ಪತ್ತೆಗೆ ತೊಡಕಾಗಲಿವೆ ಎಂಬ ಅರಿವಿದ್ದರೂ ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಹೊಸದಾಗಿ ಖರೀದಿಸುವ ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗುವವರೆಗೂ ನಿರ್ಧಿಷ್ಟ ಅವಧಿಯವರೆಗೆ ತಾತ್ಕಾಲಿಕ (ಟಿಪಿ ನಂಬರ್) ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಆದರೆ, ನಗರದಲ್ಲಿ ಐದಾರು ವರ್ಷ ಹಳೆಯ ವಾಹನಗಳು ಶಾಶ್ವತ ನೋಂದಣಿ ಸಂಖ್ಯೆಯೇ ಇಲ್ಲದೆ ಸಂಚಾರ ಮಾಡುತ್ತಿವೆ.
ಬೈಕ್, ಕಾರು, ಆಟೋ, ಬಸ್, ಲಾರಿ, ಟ್ಯಾಕ್ಟರ್ ಸೇರಿದಂತೆ ಹಲವು ಮಾದರಿಯ ವಾಹನಗಳೂ ನಂಬರ್ ಪ್ಲೇಟ್ ಇಲ್ಲದೆ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುವ ದೃಶ್ಯಗಳನ್ನು ಕಾಣಬಹುದು. ಸಾರಿಗೆ ಇಲಾಖೆಯ ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದರೂ ಪೊಲೀಸ್ ಇಲಾಖೆಯಾಗಲಿ, ಸಾರಿಗೆ ಇಲಾಖೆಯಾಗಲಿ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಹೆಲ್ಮೆಟ್, ಎಮಿಷನ್, ಪರವಾನಗಿ, ಇನ್ಶೂರೆನ್ ಸಹಿತ ವಾಹನದ ದಾಖಲೆಗಳು ಇಲ್ಲದವರಿಗೆ ದಂಡ ವಿಧಿಸುವ ಸಂಚಾರ ಠಾಣೆ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ನಗರದೊಳಗೆ ನಿತ್ಯವೂ ನಿಯಮಮೀರಿ ವಾಹನಗಳು ಓಡಾಡುತ್ತಿದ್ದರೂ ದಂಡ ವಿಧಿಸುತ್ತಿಲ್ಲ ಎಂದು ವಾಹನ ಸವಾರರು ದೂರಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನಗಳಿಂದ ಅಪಘಾತ ಸಂಭವಿಸಿದರೆ ಜವಾಬ್ದಾರರು ಯಾರು, ಸಾವು ನೋವುಗಳು ಸಂಭವಿಸಿದರೆ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಹೊಣೆ ಹೊತ್ತುಕೊಳ್ಳಬೇಕು. ನಂಬರ್ ಪ್ಲೇಟ್ ಇಲ್ಲದಿರುವುದರಿಂದ ದಂಡ ವಿಧಿಸಲು ಸಾಧ್ಯವಿಲ್ಲ ಎಂಬ ಹುಂಬತನದಿಂದ ವಾಹನಗಳ ಮಾಲೀಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ.
ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ಹಾಗೂ ಕಿರಿದಾದ ರಸ್ತೆಗಳಲ್ಲಿ ಅಡ್ಡಲಾಗಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ನಂಬರ್ ಪ್ಲೇಟ್ ಇಲ್ಲದ ಬೈಕ್, ಗೂಡ್ಸ್ ಆಟೋ ಹಾಗೂ ಟ್ರ್ಯಾಕ್ಟರ್‌ಗಳ ಬಳಕೆಯಾಗುತ್ತಿದೆ. ಅಕ್ರಮವಾಗಿ ಮರಳು, ಮಣ್ಣು, ಮರಗಳ ಕಳ್ಳ ಸಾಗಾಣೆ ಹಾಗೂ ಕಳವು, ದರೋಡೆ ಸಹಿತ ಅಪರಾಧ ಕೃತ್ಯಗಳಿಗೆ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ನಂಬರ್ ಪ್ಲೇಟ್ ಇಲ್ಲದ ವಾಹನಗಳ ಜಪ್ತಿಗೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೆಂಡ್ರಳ್ಳಿ ಗ್ರಾಮದ ಪುಟ್ಟಸ್ವಾಮಿ ಆರೋಪಿಸಿದರು.
ತ್ರಿಬಲ್ ರೈಡಿಂಗ್:
ನಗರದಲ್ಲಿ ಯುವಕರು ಅಪಾಯಕಾರಿಯಾಗಿ ವಾಹನಗಳನ್ನು ಚಾಲನೆ ಮಾಡುತ್ತಿದ್ದು ಸಾರ್ವಜನಿಕರ ಜೀವಕ್ಕೆ ಕಂಟಕವಾಗಿದೆ. ಪುಂಡರು ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳನ್ನು ಬಳಸಿಕೊಂಡು ನಡುರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದಾರೆ. ಶಾಲಾ–ಕಾಲೇಜು ಬಿಡುವ ಸಂದರ್ಭ ಶಿಕ್ಷಣ ಸಂಸ್ಥೆಗಳ ಎದುರೇ ವೀಲಿಂಗ್ ನಡೆಯುತ್ತದೆ.
ದ್ವಿಚಕ್ರ ವಾಹನದಲ್ಲಿ ಮೂರರಿಂದ ನಾಲ್ಕು ಮಂದಿ ಕುಳಿತು ವೇಗವಾಗಿ ವಾಹನ ಓಡಿಸುತ್ತಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ. ಹರಳೆ, ಮುಳ್ಳೂರು, ನರೀಪುರ, ಸತ್ತೇಗಾಲ, ಮಧುವನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ಹುಚ್ಚಾಟ ಮೆರೆಯುತ್ತಿದ್ದು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.
ಪೊಲೀಸರು ಹೆದ್ದಾರಿಯಲ್ಲಿ ಗಸ್ತು ಹೆಚ್ಚಿಸುವ ಮೂಲಕ ವೀಲಿಂಗ್‌ಗೆ ತಡೆಯೊಡ್ಡಬೇಕು, ವಾಹನ ಮಾಲೀಕರಿಗೆ ದಂಡದ ಜೊತೆಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಿದ್ದಯ್ಯನಪುರ ಗ್ರಾಮದ ಮಾದೇಶ್ ಪ್ರಜಾವಾಣಿಗೆ ತಿಳಿಸಿದರು.
- ‘ದಂಡ ವಾಹನ ಜಪ್ತಿ’
ಎಲ್ಲ ವಾಹನಗಳಿಗೂ ಕಡ್ಡಾಯವಾಗಿ ನಂಬರ್ ಪ್ಲೇಟ್ ಇರಬೇಕು. ನಂಬರ್ ಪ್ಲೇಟ್ ಇಲ್ಲದೆ ವಾಹನ ಓಡಿಸಿದರೆ ಜಪ್ತಿ ಮಾಡಿ ದಂಡ ವಿಧಿಸಲಾಗುವುದು. ಅಪಾಯಕಾರಿ ವಾಹನ ಚಾಲನೆ ವೀಲಿಂಗ್ ಸಹಿತ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಸಂಚಾರ ನಿಯಮಗಳ ಕುರಿತು ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುವುದು ಎಂದು ಡಿವೈಎಸ್‌ಪಿ ಧರ್ಮೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.