ADVERTISEMENT

150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ

ಬಿಜೆಪಿ ರಾಜ್ಯ ವಕ್ತಾರರಾದ ತೇಜಸ್ವಿನಿ ರಮೇಶ್‌ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 7:27 IST
Last Updated 28 ಏಪ್ರಿಲ್ 2018, 7:27 IST

ಚಾಮರಾಜನಗರ: ‘ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಆರಂಭವಾಗಿದ್ದು, 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ರಾಜ್ಯದ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ವಕ್ತಾರರಾದ ತೇಜಸ್ವಿನಿ ರಮೇಶ್‌ಗೌಡ ಹೇಳಿದರು.

‘ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದ ನಂತರ ಪಕ್ಷದ ಪ್ರಖರತೆ ಮತ್ತಷ್ಟು ಹೆಚ್ಚಲಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 224 ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಮಾಡುವ ಮೂಲಕ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅನುಗುಣವಾಗಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಏ. 30ರಂದು ಬಿಡುಗಡೆ ಮಾಡಲಾಗುವುದು ಎಂದರು.

ADVERTISEMENT

ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಯುವ ಮೋರ್ಚಾದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗಿಲ್ಲ. ಪಕ್ಷದ ವರಿಷ್ಠರು ಚರ್ಚಿಸಿ ಟಿಕೆಟ್‌ ನೀಡಿದ್ದಾರೆ. ಇದಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರು ಬದ್ಧರಾಗಿದ್ದಾರೆ ಎಂದು ತಿಳಿಸಿದರು.

ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು 30 ಮತದಾರರಿಗೆ ಒಂದು ಕಮಿಟಿ ರಚಿಸಲಾಗುತ್ತಿದೆ. ಜಿಲ್ಲೆಯ 4 ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಲಾಗುವುದು ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಇಂಥ ಕೆಲಸಕ್ಕೆ ಬಿಜೆಪಿ ಕೈ ಹಾಕುವುದಿಲ್ಲ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ವೆಂಕರಮಣಸ್ವಾಮಿ, ನಗರ ಘಟಕದ ಅಧ್ಯಕ್ಷ ಸುಂದರ್‌ರಾಜ್‌, ಮುಖಂಡರಾದ ಚಂದ್ರಶೇಖರ್‌, ಜಿ.ನಿಜಗುಣರಾಜು, ಮಂಗಲ ಶಿವು ಹಾಜರಿದ್ದರು.

‘ಚಡ್ಡಿ’ ದೇಶದ ರೈತರ ಸಂಕೇತ

‘ಬಿಜೆಪಿಯನ್ನು ಚಡ್ಡಿ ಸರ್ಕಾರ ಎಂಬ ಪದ ಬಳಕೆ ಮಾಡುವ ಮೂಲಕ ಕಾಂಗ್ರೆಸಿಗರು ಅಪಮಾನ ಮಾಡಿದ್ದಾರೆ. ಈ ರೀತಿ ಮಾತನಾಡಲು ಅವರಿಗೆ ಹಕ್ಕು ನೀಡಿದವರು ಯಾರು?’ ಎಂದು ಬಿಜೆಪಿ ರಾಜ್ಯ ವಕ್ತಾರರಾದ ತೇಜಸ್ವಿನಿ ರಮೇಶ್‌ಗೌಡ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಡ್ಡಿ’ ದೇಶದ ರೈತರ ಸಂಕೇತ. ಜಮೀನಿನಲ್ಲಿ ರೈತರು ಚಡ್ಡಿ ಧರಿಸಿಯೇ ಉಳುಮೆ ಮಾಡುವುದು. ಕುಸ್ತಿ, ಬಾಕ್ಸಿಂಗ್‌ ಸೇರಿದಂತೆ ಹಲವು ಕ್ರೀಡೆಗಳಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ತರುವ ಕ್ರೀಡಾಪಟುಗಳು ಕೂಡ ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಧರಿಸುವುದು ಚಡ್ಡಿಯನ್ನೇ. ಇದರ ಬಗ್ಗೆ ಹಗುರವಾಗಿ ಮಾತನಾಡಿ. ಚಡ್ಡಿ ವಿಚಾರದ ಬಗ್ಗೆ ಚರ್ಚಿಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.