ADVERTISEMENT

ಚಾಮರಾಜನಗರ: ಒಂದೇ ದಿನ 222 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:19 IST
Last Updated 22 ಅಕ್ಟೋಬರ್ 2020, 14:19 IST
ಕೋವಿಡ್‌–19 ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಗೃಹ ರಕ್ಷಕ ದಳದ ಸಿಬ್ಬಂದಿ ಗುರುವಾರ ಚಾಮರಾಜನಗರದಲ್ಲಿ ಜಾಥಾ ನಡೆಸಿದರು
ಕೋವಿಡ್‌–19 ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಗೃಹ ರಕ್ಷಕ ದಳದ ಸಿಬ್ಬಂದಿ ಗುರುವಾರ ಚಾಮರಾಜನಗರದಲ್ಲಿ ಜಾಥಾ ನಡೆಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 222 ಮಂದಿ ಕೋವಿಡ್‌–19ನಿಂದ ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೋಂಕು ಮುಕ್ತರಾಗಿರುವುದು ಇದೇ ಮೊದಲು. ಇದರೊಂದಿಗೆ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 5,066ಕ್ಕೆ ಗಡಿ ದಾಟಿದೆ.

ಹೊಸದಾಗಿ 62 ಮಂದಿಗೆ ಸೋಂಕು ತಗುಲಿದೆ. ಒಟ್ಟಾರೆ 5,687 ಪ್ರಕರಣಗಳು ದಾಖಲಾಗಿವೆ.ಕಡಿಮೆ ಪ್ರಕರಣಗಳು ವರದಿಯಾಗಿ ಹೆಚ್ಚು ಮಂದಿ ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಸದ್ಯ 503 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 222 ಜನರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಮಂದಿ ಐಸಿಯುನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆಗಳು ಹಾಗೂ ಕೇರ್‌ ಕೇಂದ್ರದಲ್ಲಿ ಇದ್ದಾರೆ.

‌ಗುರುವಾರ 1,298 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಒಳಪಡಿಸಲಾಗಿದೆ. 1,239 ಮಂದಿಯ ವರದಿ ನೆಗೆಟಿವ್‌ ಬಂದಿವೆ. 59 ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಎರಡು ಪ್ರಕರಣ ಮೈಸೂರಿನಲ್ಲಿ, ಒಂದು ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿದೆ.

ADVERTISEMENT

ಸಾವಿನ ಲೆಕ್ಕದಲ್ಲಿ ವ್ಯತ್ಯಾಸ: ಗುರುವಾರ ಸಾವಿನ ಪ್ರಕರಣ ವರದಿಯಾಗಿಲ್ಲ. ಆದರೆ, ಎರಡು ದಿನಗಳಿಂದ ಜಿಲ್ಲಾಡಳಿತ ನೀಡುತ್ತಿರುವ ವರದಿಯಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವವರ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.

ಅ.20ರಂದು ನೀಡಿದ್ದ ವರದಿಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 88 ಎಂದು ನಮೂದಿಸಲಾಗಿತ್ತು. ಕೋವಿಡ್‌ಯೇತರ ಕಾರಣದಿಂದ 31 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು. 21ರ ವರದಿಯಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವಿನ ಲೆಕ್ಕವನ್ನು 107 ಎಂದು ತೋರಿಸಿ ಕೋವಿಡ್‌ಯೇತರ ಸಾವಿನ ಸಂಖ್ಯೆಯನ್ನು 12 ಎಂದು ಉಲ್ಲೇಖಿಸಲಾಗಿತ್ತು. ಗುರುವಾರದ ವರದಿಯಲ್ಲಿ ಈ ಸಂಖ್ಯೆ ಕ್ರಮವಾಗಿ 99 ಮತ್ತು 19 ಎಂದಿದೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ‘ಅ.21ರ ರಾಜ್ಯ ಮಟ್ಟದ ವರದಿಯಲ್ಲಿ ಕೋವಿಡ್‌ ಸಾವು 107 ಹಾಗೂ 11 ಕೋವಿಡ್‌ಯೇತರ ಸಾವು ಎಂದು ನಮೂದಾಗಿದ್ದರಿಂದ ಅದೇ ಸಂಖ್ಯೆ ನೀಡಲಾಗಿತ್ತು. ಆದರೆ, ಜಿಲ್ಲೆಯ ತಜ್ಞ ವೈದ್ಯರು ಎಲ್ಲ ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಿ, ಇಲ್ಲಿವರೆಗೆ 99 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ, 19 ಮಂದಿ ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೇ ವಿವರಗಳನ್ನೊಳಗೊಂಡ ವರದಿಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿದಲಾಗಿದೆ. ಅಲ್ಲಿನ ವರದಿಯಲ್ಲೂ ತಿದ್ದುಪಡಿ ಮಾಡಲಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.