ADVERTISEMENT

ಕಾವೇರಿ ನದಿಯೊಳಗೆ ಇಳಿದು ಮೋಜು ಮಸ್ತಿ: 4 ವರ್ಷಗಳಲ್ಲಿ 28 ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 7:35 IST
Last Updated 9 ಜೂನ್ 2025, 7:35 IST
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ (ಸಂಗ್ರಹ ಚಿತ್ರ)
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ (ಸಂಗ್ರಹ ಚಿತ್ರ)   

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಹರಿಯುವ ಕಾವೇರಿ ನದಿಯ ಪಾತ್ರದಲ್ಲಿ ಹುಚ್ಚು ಸಾಹಸ ಮಾಡಲು ಹೋಗಿ ಕಳೆದ ನಾಲ್ಕು ವರ್ಷಗಳಲ್ಲಿ (2022ರಿಂದ 2025ರ ಮೇವರೆಗೆ) 28 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೋಜು ಮಸ್ತಿ ಮಾಡುವ ಹುಮ್ಮಸ್ಸಿನಲ್ಲಿ ನದಿಯೊಳಗೆ ಇಳಿದವರು ನೀರಿನ ಸೆಳೆತಕ್ಕೆ ಸಿಲುಕಿ ಬಲಿಯಾಗುತ್ತಿದ್ದಾರೆ.

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2022ರಲ್ಲಿ 9 ಮಂದಿ, 2023ರಲ್ಲಿ 10 ಮಂದಿ, 2024ರಲ್ಲಿ 6 ಮಂದಿ ಹಾಗೂ 2025ರಲ್ಲಿ 3 ಮಂದಿ ಕಾವೇರಿ ನದಿಯೊಳಗೆ ಹಾಗೂ ಭರಚುಕ್ಕಿ ಜಲಪಾತದ ಬಳಿ ಈಜಲು, ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿದ್ದಾರೆ. ಪ್ರತಿವರ್ಷ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ನದಿ ಹಾಗೂ ಜಲಪಾತಕ್ಕೆ ಇಳಿಯದಂತೆ ಕ್ರಮ ಜರುಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ತಾಲ್ಲೂಕಿನ ಪ್ರಸಿದ್ಧ ಭರಚುಕ್ಕಿ ಜಲಪಾತ ವೀಕ್ಷಣೆಗೆ ಪ್ರತಿ ವರ್ಷ ರಾಜ್ಯದಾದ್ಯಂತ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬಂದವರು ಜಲಪಾತ ವೀಕ್ಷಿಸಿ ಮರಳದೆ ನೀರಿನಲ್ಲಿ ದುಸ್ಸಾಹಸ ಮಾಡಲು ಮುಂದಾಗುತ್ತಿರುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಿರುವುದು ಅವಘಡಗಳಿಗೆ ಕಾರಣವಾಗಿದೆ.

ADVERTISEMENT

ಭರಚುಕ್ಕಿ ಜಲಪಾತದ ಸಮೀಪದ ದರ್ಗಾ, ಶಿವನಸಮುದ್ರ, ವೆಸ್ಲಿ ಸೇತುವೆ ಹಾಗೂ ಸಮೂಹ ದೇವಾಲಯಗಳ ಸುತ್ತಮುತ್ತ ಹರಿಯುವ ಕಾವೇರಿ ನದಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಪ್ರತಿ ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತದೆ. ಉಕ್ಕಿಹರಿಯುವ ನದಿಯ ಸೌಂದರ್ಯ ನೋಡಲು ಹೋಗುವ ಪ್ರವಾಸಿಗರು ಆಪತ್ತು  ತಂದುಕೊಳ್ಳುತ್ತಿದ್ದಾರೆ.

ಜಲಪಾತದ ತುತ್ತತುದಿ ತಲುಪಿ ಹುಚ್ಚಾಟ ಪ್ರದರ್ಶನ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು, ಮದ್ಯಸೇವನೆಯಂತಹ ದುಶ್ಚಟಗಳನ್ನು ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮೃತಪಟ್ಟವರ ಪೈಕಿ ಹೆಚ್ಚಿನವರು ಹೊರ ಜಿಲ್ಲೆಗಳಿಗೆ ಸೇರಿದವರಾಗಿದ್ದು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿದವರೇ ಹೆಚ್ಚಾಗಿದ್ದಾರೆ ಎನ್ನುತ್ತಾರೆ ಪೊಲೀಸರು. 

ದರ್ಗಾ, ಶಿವನಸಮುದ್ರ ಹಾಗೂ ವೆಸ್ಲಿ ಸೇತುವೆಯ ಬಳಿ ಹರಿಯುವ ಕಾವೇರಿ ನದಿಯ ತಟದಲ್ಲಿಯೇ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ನಶೆಯಲ್ಲಿ ನದಿಯ ಮಧ್ಯ ಭಾಗದಲ್ಲಿರುವ ಕಲ್ಲು ಬಂಡೆಗಳನ್ನು ತಲುಪಿ ಮೋಜು ಮಾಡಿ ಮರಳಿ ದಡಕ್ಕೆ ಬರಲಾಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ. ನದಿಯೊಳಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಹಲವರು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.

ಈಚೆಗಷ್ಟೆ ರಾಮನಗರ ಜಿಲ್ಲೆಯ ದಯಾನಂದ ಸಾಗರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕಾವೇರಿ ನದಿಯ ಮಧ್ಯಭಾಗದಲ್ಲಿರುವ ಬಂಡೆಗಳ ಮೇಲೆ ಕಾಲ ಕಳೆದು ಮರಳಿ ದಡಕ್ಕೆ ಬರುವಾಗ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಅದರಲ್ಲಿ ಓರ್ವ ಯುವಕ ಬಲಿಯಾಗಿದ್ದ. ಇಂತಹ ಹಲವು ಕಹಿ ಘಟನೆಗಳು ಪ್ರತಿ ವರ್ಷ ನಡೆಯುತ್ತಲೇ ಇರುತ್ತವೆ.

‘ಮಳೆಗಾಲದಲ್ಲಿ ಜಲಪಾತ ಮೈದುಂಬಿಕೊಳ್ಳಲಿ‌ದ್ದು ಜಲಪಾತ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಸಂದರ್ಭ ಪ್ರವಾಸಿಗರು ನದಿಗೆ ಇಳಿಯದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಸಾವಿನ ಸರಣಿ ಮುಂದುವರಿಯಲಿದೆ’ ಎಂದು ಶಿವನಸಮುದ್ರ ಗ್ರಾಮದ ಶಿವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗೃತಿ ಫಲಕ ಅಳವಡಿಕೆ: ‘ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ನಿರ್ಬಂಧಿತ ಪ್ರದೇಶದಲ್ಲಿ ನೀರಿಗೆ ಇಳಿಯಬಾರದು ಎಂದು ಎಚ್ಚರಿಕೆಯ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಯುವಕರು ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದು ನದಿಗೆ ಇಳಿಯುತ್ತಿದ್ದಾರೆ’ ಎಂದು ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ತಿಳಿಸಿದರು.

ಕಾವೇರಿ ನದಿಗೆ ಇಳಿಯದಂತೆ ದಡದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ನಿಯಮ ಮೀರಿ ನದಿಗೆ ಇಳಿಯುತ್ತಿದ್ದು ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸುತ್ತೇವೆ
ಧರ್ಮೇಂದ್ರ ಡಿವೈಎಸ್‌ಪಿ
ಹೊರ ಜಿಲ್ಲೆಗಳಿಂದ ಬರುವ ಯುವಜನರು ನದಿಯ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ನಿರ್ಬಂಧಿತ ಪ್ರದೇಶಗಳಿಗೆ ತೆರಳಿ ಆಪತ್ತು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ
ಪ್ರಶಾಂತ್ ಗ್ರಾಮಸ್ಥ
‘ನದಿಗಿಳಿಯದಂತೆ ನಿರ್ಬಂಧ ವಿಧಿಸಿ’
ಶಿವನಸಮುದ್ರ ವೆಸ್ಟಿ ಸೇತುವೆ ದರ್ಗಾ ಹಾಗೂ ಭರಚುಕ್ಕಿ ಜಲಪಾತದ ಹಿಂಭಾಗದ ಕಾವೇರಿ ನದಿಯ ಸಮೀಪ ಪೊಲೀಸ್ ಕಣ್ಗಾವಲು ಇರುವುದಿಲ್ಲ. ಹಾಗಾಗಿ ಯುವಜನತೆ ಅಂಜಿಕೆ ಇಲ್ಲದೆ ನದಿಗೆ ಇಳಿಯುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ದುರ್ಘಟನೆಗಳು ನಡೆಯುವುದಿಲ್ಲ. ಕಾಟಾಚಾರಕ್ಕೆ ಬೀಟ್ ಮಾಡಿದರೆ ಸಾಲದು ವಾರಾಂತ್ಯದ ದಿನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಎಲ್ಲೆಡೆ ಕಾನೂನು ಕ್ರಮದ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಎಂದು ಶಿವನಸಮುದ್ರ ಗ್ರಾಮದ ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.