ADVERTISEMENT

ಚಾಮರಾಜನಗರದಲ್ಲಿ 2,878 ಕ್ಷೌರಿಕ, ಅಗಸ ವೃತ್ತಿಯಲ್ಲಿರುವವರಿಗೆ ಸಹಾಯ ಧನ

ಕೋವಿಡ್‌–19 ಸಂಕಷ್ಟ: 1,018 ಮಂದಿಗೆ ಇನ್ನೂ ಬಂದಿಲ್ಲ ₹5000 ಆರ್ಥಿಕ ಸಹಾಯ

ಸೂರ್ಯನಾರಾಯಣ ವಿ
Published 11 ಸೆಪ್ಟೆಂಬರ್ 2020, 15:02 IST
Last Updated 11 ಸೆಪ್ಟೆಂಬರ್ 2020, 15:02 IST
ಕೋವಿಡ್‌ ಲಾಕ್‌ಡೌನ್‌ನಿಂದ ಜಿಲ್ಲೆಯಾದ್ಯಂತ ಕ್ಷೌರದ ಅಂಗಡಿಗಳು ಮುಚ್ಚಿದ್ದವು (ಸಂಗ್ರಹ ಚಿತ್ರ)
ಕೋವಿಡ್‌ ಲಾಕ್‌ಡೌನ್‌ನಿಂದ ಜಿಲ್ಲೆಯಾದ್ಯಂತ ಕ್ಷೌರದ ಅಂಗಡಿಗಳು ಮುಚ್ಚಿದ್ದವು (ಸಂಗ್ರಹ ಚಿತ್ರ)   

ಚಾಮರಾಜನಗರ: ಕೋವಿಡ್‌–19 ಕಾರಣದಿಂದ ಸಂಕಷ್ಟಕ್ಕೆ ಈಡಾಗಿದ್ದ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ₹5,000 ಸಹಾಯ ಧನ ಜಿಲ್ಲೆಯಲ್ಲಿ ಇದುವರೆಗೆ 2,878 ಮಂದಿಗೆ ತಲುಪಿದೆ. ಇನ್ನೂ 1,018 ಮಂದಿಗೆ ಬರಬೇಕಿದೆ.

ಅಗಸ ವೃತ್ತಿಯಲ್ಲಿ ತೊಡಗಿರುವ 2,106 ಮಂದಿಯ ಖಾತೆಗೆ ತಲಾ ₹5,000ದಂತೆ ₹1.05 ಕೋಟಿ ಜಮೆ ಆಗಿದೆ. ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ 772 ಮಂದಿಗೆ ₹5,000ದಂತೆ ₹38.85 ಲಕ್ಷ ಬಂದಿದೆ.

ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಲಾಕ್‌ಡೌನ್‌ನಿಂದಾಗಿ ಕ್ಷೌರದ ಅಂಗಡಿಗಳು ಮುಚ್ಚಿದ್ದವು. ಆಗಸ ವೃತ್ತಿ ನಡೆಸುತ್ತಿದ್ದವರು, ಲಾಂಡ್ರಿ ಇಟ್ಟುಕೊಂಡಿದ್ದವರಿಗೂ ತೊಂದರೆಯಾಗಿತ್ತು. ಇವರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಂದು ಬಾರಿ ₹5,000 ಹಣವನ್ನು ಕ್ಷೌರಿಕರು ಹಾಗೂ ಅಗಸ ವೃತ್ತಿಯಲ್ಲಿರುವವರ ಖಾತೆಗೆ ನೇರವಾಗಿ ಜಮೆ ಮಾಡುವ ಘೋಷಣೆ ಮಾಡಿದ್ದರು. ಅದರಂತೆ, ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ADVERTISEMENT

ಕ್ಷೌರಿಕ ವೃತ್ತಿಯಲ್ಲಿರುವ 1,057 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 59 ಅರ್ಜಿಗಳು ವಿವಿಧ ಕಾರಣಗಳಿಗೆ ತಿರಸ್ಕೃತವಾಗಿತ್ತು. 998 ಅರ್ಜಿಗಳನ್ನು ಕಾರ್ಮಿಕ ಇಲಾಖೆ ಅಂಗೀಕರಿಸಿತ್ತು.

ಅಗಸ ವೃತ್ತಿಯಲ್ಲಿ ತೊಡಗಿಕೊಂಡಿರುವ 2,950 ಮಂದಿ ಅರ್ಜಿ ಸಲ್ಲಿಸಿದ್ದರು. 52 ಅರ್ಜಿಗಳು ತಿರಸ್ಕೃತಗೊಂಡು 2,898 ಫಲಾನುಭವಿಗಳ ಅರ್ಜಿಗಳನ್ನು ಸಹಾಯಧನಕ್ಕಾಗಿ ಶಿಫಾರಸು ಮಾಡಲಾಗಿತ್ತು.

‘ಕ್ಷೌರಿಕ ಅಥವಾ ಅಗಸ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳಲ್ಲಿ ಒಬ್ಬರಿಗೆ ಮಾತ್ರ ಸಹಾಯಧನ ಎಂಬ ನಿಯಮ ಇತ್ತು. ಆದರೆ, ಜಿಲ್ಲೆಯಲ್ಲಿ ಆರಂಭದಲ್ಲಿ ಒಂದೇ ಕುಟುಂಬದ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ, ಒಂದೇ ದಾಖಲೆಗಳನ್ನು ಹಲವರು ಸಲ್ಲಿಸುವ ಸಂದರ್ಭದಲ್ಲಿ ಅರ್ಜಿಗಳು ತಿರಸ್ಕೃತವಾಗುತ್ತಿದ್ದವು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘18 ವರ್ಷದಿಂದ 65 ವರ್ಷದೊಳಗಿನ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಅರ್ಜಿಯೊಂದಿಗೆ,ಕಾರ್ಮಿಕ ಇಲಾಖೆ ಅಧಿಕಾರಿಗಳು, ನಗರಸಭೆ ಕಂದಾಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧಿಕಾರಿ.. ಹೀಗೆ ಯಾರಾದರೂ ಒಬ್ಬರಿಂದ ದೃಢೀಕರಿಸಿದ ಉದ್ಯೋಗ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಿತ್ತು. ಇದರ ಜೊತೆಗೆ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರಗಳನ್ನು ನೀಡಲು ಸೂಚಿಸಲಾಗಿತ್ತು. ಜಿಲ್ಲೆಯಲ್ಲಿ4,007 ಅರ್ಜಿಗಳು ಬಂದಿದ್ದವು. ಈ ಪೈಕಿ 111 ಅರ್ಜಿಗಳು ತಿರಸ್ಕತಗೊಂಡಿದ್ದವು. 3,896 ಅರ್ಜಿಗಳನ್ನು ಅಂಗೀಕರಿಸಲಾಗಿತ್ತು. 1,018 ಮಂದಿಯನ್ನು ಬಿಟ್ಟು ಉಳಿದವರ ಖಾತೆಗೆ ಹಣ ಜಮೆ ಆಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಿದೆ. ಮೊದಲ ಹಂತದಲ್ಲಿ ಸ್ವಲ್ಪ ಫಲಾನುಭವಿಗಳಿಗೆ ಹಾಗೂ ಎರಡನೇ ಹಂತದಲ್ಲಿ ಮತ್ತೊಂದಷ್ಟು ಜನರಿಗೆ ಹಣ ವರ್ಗಾವಣೆ ಮಾಡಿದೆ. ಉಳಿದವರ ಖಾತೆಗೆ ಶೀಘ್ರದಲ್ಲಿ ಹಣ ಜಮೆ ಆಗುವ ನಿರೀಕ್ಷೆ’ ಎಂದು ಮಹದೇವಸ್ವಾಮಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.