ADVERTISEMENT

ಕೊಳ್ಳೇಗಾಲ: ಕೋವಿಡ್‌ 19ಗೆ ಚಾಮರಾಜನಗರ ಜಿಲ್ಲೆಯಲ್ಲಿ ಎರಡನೇ ಸಾವು

ಜ್ವರದಿಂದ ಬಳಲುತ್ತಿದ್ದ ಪಾಳ್ಯದ 65 ವರ್ಷ ವೃದ್ಧ ದಾರಿ ಮಧ್ಯೆ ಮೃತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 15:08 IST
Last Updated 13 ಜುಲೈ 2020, 15:08 IST
ಮೃತದೇಹವನ್ನು ಆಂಬುಲೈನ್ಸ್‌ನತ್ತ ಕೊಂಡೊಯ್ಯುತ್ತಿರುವ ಸ್ವಯಂ ಸೇವಕರು
ಮೃತದೇಹವನ್ನು ಆಂಬುಲೈನ್ಸ್‌ನತ್ತ ಕೊಂಡೊಯ್ಯುತ್ತಿರುವ ಸ್ವಯಂ ಸೇವಕರು   

ಚಾಮರಾಜನಗರ: ಕೋವಿಡ್‌–19ನಿಂದಾಗಿ ಜಿಲ್ಲೆಯಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಎರಡನೇ ಸಾವಿನ ಪ್ರಕರಣ ಇದು.

ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ 65 ವರ್ಷದ ವೃದ್ಧ ಮೃತಪಟ್ಟವರು. ಅವರು ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ಆ ಬಳಿಕ ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೋಮವಾರ ಬಂದಿರುವ ಪರೀಕ್ಷಾ ವರದಿಯಲ್ಲಿ ಅವರಲ್ಲಿ ಕೋವಿಡ್‌–19 ಇದ್ದುದು ದೃಢಪಟ್ಟಿದೆ.

ಜಿಲ್ಲಾಡಳಿತವು ಮೃತದೇಹವನ್ನು ವಶಕ್ಕೆ ಪಡೆದು, ಚಾಮರಾಜನಗರದ ಬಳಿ ಗುರುತಿಸಿರುವ ಸರ್ಕಾರಿ ಜಮೀನಿನಲ್ಲಿ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನಡೆಸಲು ಕ್ರಮ ಕೈಗೊಂಡಿದೆ. ಪಿಎಫ್‌ಐ ಕಾರ್ಯಕರ್ತರು ಈ ಕೆಲಸವನ್ನು ನಿರ್ವಹಿಸಿದ್ದಾರೆ.

ADVERTISEMENT

ವ್ಯಕ್ತಿಯು ಏಳು ದಿನಗಳಿಂದ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಭಾನುವಾರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಅಲ್ಲಿನ ಸಿಬ್ಬಂದಿ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದಾರೆ. ಆದರೆ, ಸಂಬಂಧಿಕರು ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದಾರೆ. ಜ್ವರ ಇದ್ದುದರಿಂದ ಕೋವಿಡ್‌–19 ಪರೀಕ್ಷೆಗೆ ಒಳಗಾಗುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಕೊಳ್ಳೇಗಾಲದ ಆಸ್ಪತ್ರೆಗೆ ಹೊರಟಿದ್ದರು. ದಾರಿ ಮಧ್ಯೆ ಸಂಜೆ 4 ಗಂಟೆಗೆ ಅವರು ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿಯ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೇರ ಸಂಪರ್ಕಕ್ಕೆ ಬಂದವರನ್ನು ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಲಾಗಿದೆ. ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೂ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

14 ಹೊಸ ಪ್ರಕರಣ: ಈ ನಡುವೆ, ಗುಂಡ್ಲುಪೇಟೆಯ ಪುರಸಭೆಯ ಸದಸ್ಯರೊಬ್ಬರು, ಗುಂಡ್ಲುಪೇಟೆಯ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ14 ಕೋವಿಡ್ ಪ್ರಕರಣಗಳು ವರದಿಯಾಗಿವೆ. 16 ಮಂದಿ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆ 187ಕ್ಕೆ ತಲುಪಿದೆ. ಗುಣಮುಖ‌ರಾದವರ ಸಂಖ್ಯೆ 93ಕ್ಕೆ ಹಿಗ್ಗಿದೆ. ಪ್ರಸ್ತುತ 92 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಕೋವಿಡ್‌ ಆಸ್ಪತ್ರೆ/ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ದೃಢಪಟ್ಟ ಪ್ರಕರಣಗಳ ಪೈಕಿ 11 ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲ್ಲೂಕಿಗೆ ಸೇರಿವೆ. ವ್ಯಕ್ತಿ ಮೃತಪಟ್ಟ ಪಾಳ್ಯದ ಪ್ರಕರಣ ಸೇರಿ, ಮೂರು ಪ್ರಕರಣಗಳು ಕೊಳ್ಳೇಗಾಲ ತಾಲ್ಲೂಕಿನಲ್ಲಿ ವರದಿಯಾಗಿವೆ. ಒಂಬತ್ತು ಪ್ರಕರಣಗಳು ಸೋಂಕಿತರ ಸಂಪರ್ಕಿತರದ್ದಾದರೆ, ಬೆಂಗಳೂರಿನಿಂದ ಬಂದ ಒಬ್ಬರಿಗೆ ಸೋಂಕು ತಗುಲಿದರೆ, ಇನ್ನೊಬ್ಬರ ಸೋಂಕಿನ ಮೂಲ ಗೊತ್ತಾಗಿಲ್ಲ.

16 ಮಂದಿ ಗುಣಮುಖ: ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ 16 ಮಂದಿಯಲ್ಲಿ 11 ಜನ ಗುಂಡ್ಲುಪೇಟೆ ಹಾಗೂ ತಾಲ್ಲೂಕಿನವರೇ ಇದ್ದಾರೆ. ಇವರಲ್ಲಿ 11 ವರ್ಷದ ಬಾಲಕ ಒಬ್ಬನಿದ್ದಾನೆ. ಗುಂಡ್ಲುಪೇಟೆ ಪಟ್ಟಣದ 65 ವರ್ಷದ ಮಹಿಳೆಯೊಬ್ಬರೂ ಸೋಂಕು ಮುಕ್ತರಾಗಿದ್ದಾರೆ.

ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕುಗಳ ತಲಾ ಇಬ್ಬರು ಮತ್ತು ಯಳಂದೂರು ತಾಲ್ಲೂಕಿನ ಒಬ್ಬರು ಮನೆಗೆ ಮರಳಿದ್ದಾರೆ.

1,439 ಮಂದಿಯ ವರದಿ ಬಾಕಿ

ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್‌–19 ಪರೀಕ್ಷಾಲಯದಲ್ಲಿ ಸೋಮವಾರ 604 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 491 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಪರೀಕ್ಷೆಗಾಗಿ ಕಳುಹಿಸಿರುವ ಇನ್ನೂ 1,439 ಮಾದರಿಗಳ ವರದಿ ಬರುವುದಕ್ಕೆ ಬಾಕಿ ಇದೆ.

ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದ 135 ಮಂದಿ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿದ್ದ 183 ಮಂದಿಯನ್ನು ಸೋಮವಾರ ಗುರುತಿಸಲಾಗಿದ್ದು, ಎಲ್ಲರನ್ನೂ ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಒಟ್ಟು 2,803 ಮಂದಿ ಸಂಪರ್ಕಿತರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.