ADVERTISEMENT

4 ವಿಭಾಗೀಯ ಕಚೇರಿ ಆರಂಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 7:05 IST
Last Updated 13 ಸೆಪ್ಟೆಂಬರ್ 2011, 7:05 IST

ಕೊಳ್ಳೇಗಾಲ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸೌಲಭ್ಯಕ್ಕಾಗಿ ಫಲಾನುಭವಿಗಳ ಬೆಂಗಳೂರು ಅಲೆದಾಟ ತಪ್ಪಿಸಲು 4 ಉಪ ವಿಭಾಗ ಕಚೇರಿ ಪ್ರಸಕ್ತ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು. ರಾಜ್ಯದ ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ನಿಗಮದ ವಿಭಾಗೀಯ ಕಚೇರಿ ತೆರೆಯಲಾಗುತ್ತದೆ. ಈ ಸಂಬಂಧ ನಿರ್ಣಯ ಸಹ ಕೈಗೊಳ್ಳಲಾಗಿದೆ. ನಿಗಮದಿಂದ ಒಟ್ಟು 8.20 ಕೋಟಿ ಯೋಜನೆಗಳಿಗೆ ಮಂಜೂರಾತಿ ದೊರಕಿದೆ. ಈ ವರ್ಷದಿಂದ ವೈದ್ಯಕೀಯ ಪದವಿ ಪಡೆದವರು ಕ್ಲಿನಿಕ್ ತೆರೆಯಲು, ವಕೀಲರು ಕಚೇರಿ ತೆರೆಯಲು ಹಾಗೂ ವ್ಯಾಪಾರಕ್ಕೆ ಅವಕಾಶವನ್ನು ನಿಗಮದಿಂದ ನೀಡಲಾಗುವುದು ಎಂದರು.

ನಿಗಮ ಜಿಲ್ಲೆಗೆ ಆದ್ಯತೆ ನೀಡಿದೆ. ಕೊಳ್ಳೇಗಾಲ, ಚಾಮರಾಜನಗರ, ಹನೂರು, ಗುಂಡ್ಲುಪೇಟೆ ತಾಲ್ಲೂಕಿನ 625 ಜನರಿಗೆ ವೈಯುಕ್ತಿಕ ಕೊಳವೆಬಾವಿ ಕೊರೆಯಲು ಮಂಜೂರಾತಿ ನೀಡಿ ರೂ. 6.25 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಹೈನುಗಾರಿಕೆಗೆ 1000 ಜನ ಫಲಾನುಭವಿಗಳಿಗೆ ರಾಸು ಖರೀದಿಗೆ ರೂ.1.75 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಹೈನುಗಾರಿಕೆಗೆ ಈ ಹಿಂದೆ ನೀಡುತ್ತಿದ್ದ ರೂ.35 ಸಾವಿರ ಮೊತ್ತವನ್ನು 58 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಗೆ ಈ ಹಿಂದೆ ಇದ್ದ 50 ಸಾವರಿ ರೂಪಾಯಿಗಳನ್ನು 2.5 ಲಕ್ಷಕ್ಕೆ ಏರಿಸಲಾಗಿದೆ. ಕೊಳವೆ ಬಾವಿಗೆ ಈ ಹಿಂದೆ ರೂ. 1 ಲಕ್ಷ ನೀಡುತ್ತಿದ್ದು, ಈಗ ರೂ. 1.50 ಲಕ್ಷ ಮೊತ್ತಕ್ಕೆ ಏರಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವರು ನೀಡಿದ ಭರವಸೆಯಂತೆ ರೂ.3.20 ಕೋಟಿ ಹಣವನ್ನು ಪರಿಶಿಷ್ಟ ಜಾತಿಯ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ ಪರಿಶಿಷ್ಟ ಜನಾಂಗದ ಪರವಾಗಿ ಹಣ ಬಿಡುಗಡೆ ಮಾಡಿದ ಇಲಾಖೆ ಸಚಿವರನ್ನು ಕೃತಜ್ಞತೆ ಸಲ್ಲಿಸುವುದಾಗಿ ತಿಸಿದರು.

ಬಿಜೆಪಿ ನಗರಾಧ್ಯಕ್ಷ ಮಧುಸೂದನ್,ಅಕ್ರಂಉಲ್ಲಾಖಾನ್, ರಾಜಶೇಖರ್, ಉಮ್ಮತ್ತೂರು ನಾಗೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.