ADVERTISEMENT

ಚಿಕ್ಕಲ್ಲೂರು ಜಾತ್ರೆ: ಪಂಕ್ತಿಸೇವೆ ನಿರ್ವಿಘ್ನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:44 IST
Last Updated 6 ಜನವರಿ 2018, 8:44 IST
ದೇವಸ್ಥಾನದ ಹೊರವಲಯದಲ್ಲಿ ನಿರ್ಮಿಸಿಕೊಂಡ ಬಿಡಾರಗಳಲ್ಲಿ ಭಕ್ತರು ಪಂಕ್ತಿಸೇವೆ ನಡೆಸಿದರು
ದೇವಸ್ಥಾನದ ಹೊರವಲಯದಲ್ಲಿ ನಿರ್ಮಿಸಿಕೊಂಡ ಬಿಡಾರಗಳಲ್ಲಿ ಭಕ್ತರು ಪಂಕ್ತಿಸೇವೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಂಕ್ತಿಸೇವೆ ಶುಕ್ರವಾರ ನಡೆಯಿತು. ಪ್ರಾಣಿ ಬಲಿ ನಿಷೇಧಿಸಲಾಗಿತ್ತು. ಪಂಕ್ತಿಸೇವೆ ನಡೆಸಲು ಜಾತ್ರೆಯ ಆವರಣದಲ್ಲಿ ಪ್ರಾಣಿವಧೆಗೆ ಅವಕಾಶ ನೀಡುವುದಿಲ್ಲ. ಸಿಹಿ ಊಟ ಮಾತ್ರ ನಡೆಸಬೇಕು ಎಂದು ಜಿಲ್ಲಾಡಳಿತ ಆದೇಶಿಸಿತ್ತು. ಆದರೂ ಭಕ್ತರು ಮಾಂಸಾಹಾರ ಸವಿದರು.

ಮುಂಜಾಗ್ರತಾ ಕ್ರಮವಾಗಿ ಜಾತ್ರೆಗೆ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ತಂದಿದ್ದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಆದರೆ, ಅನೇಕ ಭಕ್ತರು ಮೊದಲೇ ಮಾಂಸವನ್ನು ಸಿದ್ಧಪಡಿಸಿಕೊಂಡು ತಂದು ಜಾತ್ರೆಯ ಹೊರವಲಯದಲ್ಲಿ ನಿರ್ಮಿಸಿಕೊಂಡಿದ್ದ ಬಿಡಾರದಲ್ಲಿ ಆಹಾರ ತಯಾರಿಸಿದರು. ಕೆಲವರು ಪೊಲೀಸರ ಕಣ್ತಪ್ಪಿಸಿ ಬೇರೆ ಮಾರ್ಗಗಳಲ್ಲಿ ಕುರಿ, ಕೋಳಿಗಳನ್ನು ತಂದು ಕೊಯ್ದು ಗದ್ದಿಗೆ, ಕಂಡಾಯ ಮತ್ತು ಬಿರುದುಗಳಿಗೆ ಎಡೆ ಅರ್ಪಿಸಿ, ಪಂಕ್ತಿಯಲ್ಲಿ ಭೋಜನ ಸವಿದರು.

‘ನಮ್ಮ ಮುತ್ತಾತನಿಗೂ ಹಿಂದಿನ ತಲೆಮಾರಿನಿಂದ ಪಂಕ್ತಿಸೇವೆ ನಡೆಸುತ್ತಾ ಬಂದಿದ್ದೇವೆ. ಈಗ ಅದನ್ನು ಮಾಡುವಂತಿಲ್ಲ ಎಂದು ಆದೇಶ ಮಾಡಿದ ಮಾತ್ರಕ್ಕೆ ನಮ್ಮ ಸಂಪ್ರದಾಯ ಬಿಡಲು ಸಾಧ್ಯವಿಲ್ಲ. ನಾವೇನೂ ದೇವಸ್ಥಾನದ ಆವರಣದಲ್ಲಿ ಪ್ರಾಣಿಗಳನ್ನು ಕೊಯ್ಯುವುದಿಲ್ಲ. ದೂರದ ಜಮೀನಿನಲ್ಲಿ ಕೊಯ್ದು ಎಡೆ ಅರ್ಪಿಸುತ್ತೇವೆ’ ಎಂದು ತಿ.ನರಸೀಪುರದಿಂದ ಬಂದ ಭಕ್ತರೊಬ್ಬರು ತಿಳಿಸಿದರು.

ADVERTISEMENT

ಕ್ಷೀಣಿಸಿದ ಭಕ್ತರ ಸಂಖ್ಯೆ: ಜಾತ್ರೆಯ ನಾಲ್ಕನೇ ದಿನವಾದ ಪಂಕ್ತಿಸೇವೆಯಂದು ಪ್ರತಿವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಈ ಬಾರಿ ಪ್ರಾಣಿಬಲಿ ನಿಷೇಧದ ಪರಿಣಾಮ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.