ADVERTISEMENT

ಮಕ್ಕಳೇ ಸ್ಫೂರ್ತಿ: 55 ವರ್ಷದ ಅಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ

ಕೊಳ್ಳೇಗಾಲ: 8ನೇ ತರಗತಿವರೆಗೆ ಓದಿದ್ದ ಆಶಾ ಕಾರ್ಯಕರ್ತೆ ಜಯ ಸುಂದರಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 18:30 IST
Last Updated 30 ಜೂನ್ 2020, 18:30 IST
ಜಯಸುಂದರಿ
ಜಯಸುಂದರಿ   

ಚಾಮರಾಜನಗರ: ಶೈಕ್ಷಣಿಕ ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ಸಾಬೀತು ಮಾಡಲು ಹೊರಟಿದ್ದಾರೆ 55 ವರ್ಷ ವಯಸ್ಸಿನ ಈ ಮಹಿಳೆ. ಅದಕ್ಕೆ ಸ್ಫೂರ್ತಿಯಾದವರು, ಉನ್ನತ ಶಿಕ್ಷಣ ಪಡೆದಿರುವ ಅವರ ಮೂವರು ಮಕ್ಕಳು!

ಹೆಸರು ಜಯಸುಂದರಿ. ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ. ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. 55ನೇ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪಾಸ್‌ ಮಾಡುವ ಹಂಬಲದಿಂದ, ಈ ಬಾರಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯತ್ತಿದ್ದಾರೆ. ಬಹುಶಃ ರಾಜ್ಯದಲ್ಲೇ ಪರೀಕ್ಷೆ ಬರೆಯುತ್ತಿರುವ ಹಿರಿಯ ವಿದ್ಯಾರ್ಥಿಯೂ ಇವರೇ.

ನಗರದ ವಿಎಚ್‌ಪಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ಮೂರು ಪ‍ರೀಕ್ಷೆಗಳನ್ನು ಬರೆದಿದ್ದಾರೆ. ಇನ್ನು ಮೂರು ಪರೀಕ್ಷೆ ಬರೆಯುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ‘ಮೂರು ಪರೀಕ್ಷೆಯನ್ನೂ ಚೆನ್ನಾಗಿ ಮಾಡಿರುವೆ’ ಎಂದು ಹೇಳುವ ಜಯಸುಂದರಿ ಅವರು, ಎಲ್ಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿ ಉತ್ತೀರ್ಣರಾಗುವ ಆತ್ಮವಿಶ್ವಾಸ ಹೊಂದಿದ್ದಾರೆ.

ADVERTISEMENT

ಜಯಸುಂದರಿ ಅವರು 8ನೇ ತರಗತಿವರೆಗೆ ಓದಿದ್ದಾರೆ. 1982ರಲ್ಲಿ ಅವರು ಕೊನೆಯದಾಗಿ ಶಾಲೆಯ ಮುಖ ನೋಡಿದ್ದಾರೆ. ಅವರಿಗೆ ಮೂವರು ಮಕ್ಕಳು ಇಬ್ಬರು ಹೆಣ್ಣು, ಒಬ್ಬ ಮಗ. ಮೂವರೂ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಹುದ್ದೆಗಳಲ್ಲಿದ್ದಾರೆ.

ದೊಡ್ಡ ಮಗಳು ಯಸಂತ ಮೇರಿ ಅವರು ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡಿದರೆ, ಮಗ ದೇವರಾಜು ಹಾಗೂ ಚಿಕ್ಕ ಮಗಳು ಮೇರಿ ಶ್ಯಾಮಲಾ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಜಯಸುಂದರಿ ಅವರ ಶೈಕ್ಷಣಿಕ ಸಾಧನೆಯ ಮಹತ್ವಾಕಾಂಕ್ಷೆಯ ಹಿಂದೆ ಮೂವರು ಮಕ್ಕಳು ಇದ್ದಾರೆ. ಪತಿ ವಿಜಯರಾಜು ಅವರ ಪ್ರೋತ್ಸಾಹವೂ ಇದೆ.

ಮಕ್ಕಳು ಪ್ರೇರಣೆ: ‘ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದ್ದೇವೆ. ಒಳ್ಳೆಯ ಕೆಲಸದಲ್ಲಿ ಇದ್ದಾರೆ. ಅವರನ್ನು ಕಂಡು ನಾನು ಯಾಕೆ ಓದಬಾರದು ಎಂದುಕೊಂಡೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದೆ. ಪತಿ ಪ್ರೋತ್ಸಾಹ ನೀಡಿದರು. ಮಕ್ಕಳು ಮಾರ್ಗದರ್ಶನ ಮಾಡಿದರು’ ಎಂದು ಜಯಸುಂದರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನನ್ನನ್ನು ಸಿದ್ಧಗೊಳಿಸುವಲ್ಲಿ ಮಕ್ಕಳ ಪಾತ್ರ ಹೆಚ್ಚಿದೆ. ಲಾಕ್‌ಡೌನ್‌ ಅವಧಿಯಲ್ಲಿ ಗಣಿತ, ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ನನಗೆ ಹೇಳಿಕೊಟ್ಟಿದ್ದಾರೆ. ಅವರು ಮಾಡಿದ ಪಾಠದಿಂದ ಪರೀಕ್ಷೆ ಬರೆಯಲು ಅನುಕೂಲವಾಗಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ನಾಲ್ಕು ಜನರಿಗೆ ಪ್ರೇರಣೆಯಾದರೆ ಸಾರ್ಥಕ

‘ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯದ ಎಷ್ಟೋ ಮಕ್ಕಳು ನಮ್ಮಲ್ಲಿದ್ದಾರೆ. ಅಂತಹವರಿಗೆ ನನ್ನ ಪ್ರಯತ್ನ ಪ್ರೇರಣೆಯಾಗಬೇಕು ಎಂಬುದು ನನ್ನ ಆಸೆ’ ಎಂದು ಜಯಸುಂದರಿ ಅವರು ತಿಳಿಸಿದರು.

‘ವಿಶೇಷವಾಗಿ, ನಮ್ಮಲ್ಲಿ ಹೆಣ್ಣು ಮಕ್ಕಳನ್ನು ಪೋಷಕರು ಶಾಲೆಯಿಂದ ಬಿಡಿಸುತ್ತಾರೆ. ಈಗಿನ ಕಾಲದಲ್ಲಿ ಶಿಕ್ಷಣ ಇಲ್ಲದಿದ್ದರೆ ಏನೂ ಇಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನನ್ನನ್ನು ನೋಡಿ ನಾಲ್ಕೈದು ಮಂದಿಯಾದರೂ ಶಿಕ್ಷಣ ಪಡೆಯಲು ಮುಂದಾದರೆ ನನಗೆ ಅದೇ ಸಂತೋಷ’ ಎಂದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿ, ಪಿಯುಸಿ ಪರೀಕ್ಷೆಯನ್ನೂ ಬರೆಯಬೇಕು ಎಂದಿದ್ದೇನೆ. ನನ್ನ ಆಸೆ ಈಡೇರಲಿದೆ ಎಂಬ ವಿಶ್ವಾಸ ಇದೆ’ ಎಂದು ಜಯಸುಂದರಿ ತಮ್ಮ ಭವಿಷ್ಯದ ಕನಸನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.