ADVERTISEMENT

ಬಾಟಲಿಯೊಳಗೆ ಮೊಟ್ಟೆಯಿಟ್ಟ ಹಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:22 IST
Last Updated 2 ಫೆಬ್ರುವರಿ 2018, 9:22 IST

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ಸೋಮಹಳ್ಳಿ ಗ್ರಾಮದಲ್ಲಿ ಹಿಡಿದಿದ್ದ ಹಾವು ದಿನ ಬೆಳಗಾಗುವುದರಲ್ಲಿ ಮೊಟ್ಟೆಗಳನ್ನಿಟ್ಟು ಅಶ್ಚರ್ಯ ಮೂಡಿಸಿದೆ. ಮಂಗಳವಾರ ರಾತ್ರಿ ಗ್ರಾಮದ ಮಹದೇವಪ್ಪ ಎಂಬುವವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಅದನ್ನು ಹಿಡಿದು ಕಾಡಿಗೆ ಬಿಡಲು ಸ್ನೇಕ್‌ ಶಶಿ ಎಂಬುವವರಿಗೆ ಕರೆ ಮಾಡಿ ಮನವಿ ಮಾಡಿದ್ದರು.

ಕೂಡಲೇ, ಮನೆಗೆ ಬಂದ ಶಶಿ, ‘ಚಕ್ಕರ್ ಕಿಲ್‌ಬ್ಯಾಕ್’ ಎಂಬ ಜಾತಿಗೆ ಸೇರಿದ ಸುಮಾರು 5ರಿಂದ 6ವರ್ಷದ, 4ಅಡಿ ಉದ್ದವಿದ್ದ ಹಾವನ್ನು ರಕ್ಷಿಸಿದ್ದರು. ರಾತ್ರಿಯಾದ್ದರಿಂದ ಬೆಳಿಗ್ಗೆ ಸುರಕ್ಷಿತ ಸ್ಥಳಕ್ಕೆ ಬಿಡಲು ನಿರ್ಧರಿಸಿ ಅದನ್ನು ಡಬ್ಬದಲ್ಲಿ ಹಾಕಿಟ್ಟಿದ್ದರು. ಬೆಳಿಗ್ಗೆ ಹಾವನ್ನು ಕಾಡಿಗೆ ಬಿಡುವ ಸಲುವಾಗಿ ಡಬ್ಬ ತೆಗೆದು ನೋಡಿದಾಗ ಹಾವು ಸುಮಾರು 70ಕ್ಕೂ ಹೆಚ್ಚು ಮೊಟ್ಟೆಗಳನ್ನಿಟ್ಟಿದೆ. ಬಳಿಕ, ಸ್ನೇಕ್‌ ರವಿರಾಜ್‌ ಅವರನ್ನು ಕರೆಸಿ ಕೊಂಡು ಮೊಟ್ಟೆಗಳನ್ನು ಹಾವಿನಿಂದ ಸುರಕ್ಷಿತವಾಗಿ ಬೇರ್ಪಡಿಸಿದರು.

‘ಗರ್ಭಾವಸ್ಥೆಯಲ್ಲಿದ್ದ ಈ ಹಾವು ಮೊಟ್ಟೆಗಳನ್ನಿಡಲು ಸುರಕ್ಷಿತ ಜಾಗ ಅರಸಿ ಬಂದಿರಬಹುದು. ಹಾವನ್ನು ಈಗಲೇ ಕಾಡಿಗೆ ಬಿಟ್ಟರೆ ಮೊಟ್ಟೆಗಳು ಹಾಳಾ ಗುತ್ತವೆ ಎಂಬ ಕಾರಣದಿಂದ ಹಾವನ್ನು ಬೇರ್ಪಡಿಸಲಾಗಿದೆ. ಮೊಟ್ಟೆಗಳು ಮರಿಯಾಗಲು ಸುಮಾರು 60ರಿಂದ 70 ದಿನಗಳು ಬೇಕು. ಹೊರಗಿಟ್ಟರೆ ಹಾಳಾಗುವ ಕಾರಣ ಮೊಟ್ಟೆಯೊಡೆದು ಮರಿಯಾಗಲು ಅಗತ್ಯ ಶಾಖದ ವಾತಾವರಣ ನಿರ್ಮಿಸಿಡಲಾಗಿದೆ. ಅವು ಮರಿಯಾದ ನಂತರ ಹಾವಿನ ಜತೆ ಕಾಡಿಗೆ ಬಿಡಲಾಗುವುದು ಎಂದು ಶಶಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.