ADVERTISEMENT

ಚಾಮರಾಜನಗರ:ಶೇ 60 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ ಇಲ್ಲ

ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಆರಂಭ, ವಿಜ್ಞಾನ, ವಾಣಿಜ್ಯ ಪಾಠಕ್ಕೆ ಯು-ಟ್ಯೂಬ್‌ ಚಾನೆಲ್‌

ಸೂರ್ಯನಾರಾಯಣ ವಿ
Published 17 ಆಗಸ್ಟ್ 2020, 19:30 IST
Last Updated 17 ಆಗಸ್ಟ್ 2020, 19:30 IST
ಉಪನ್ಯಾಸಕರೊಬ್ಬರು ಆನ್‌ಲೈನ್‌ ಪಾಠದಲ್ಲಿ ನಿರತರಾಗಿರುವುದು
ಉಪನ್ಯಾಸಕರೊಬ್ಬರು ಆನ್‌ಲೈನ್‌ ಪಾಠದಲ್ಲಿ ನಿರತರಾಗಿರುವುದು   

ಚಾಮರಾಜನಗರ: ಕೋವಿಡ್‌ –19 ಕಾರಣದಿಂದ ಪದವಿ ಪೂರ್ವ ಕಾಲೇಜುಗಳು ಆರಂಭವಾಗುವ ದಿನ ಇನ್ನೂ ನಿಗದಿಯಾಗದೇ ಇರುವುದರಿಂದ ಜಿಲ್ಲಾ ಪಿಯು ಇಲಾಖೆ ದ್ವಿತೀಯ ಪಿಯುಸಿ ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದೆ.

ವಿಜ್ಞಾನ ಹಾಗೂ ‌ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಯುಟ್ಯೂಬ್‌ ಚಾನೆಲ್‌ ಮೂಲಕ‌ವೂ ಪಾಠ ಮಾಡಲು ಸಿದ್ಧತೆ ನಡೆಸಿದೆ.

ಆದರೆ, ಬಡ ಕುಟುಂಬಗಳ ವಿದ್ಯಾರ್ಥಿಗಳೇ ಹೆಚ್ಚಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳು ಇಲ್ಲ. ಹೀಗಾಗಿ ಆನ್‌ಲೈನ್‌ ಬೋಧನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಆನ್‌ಲೈನ್‌ ಪಾಠ ವಂಚಿತ ವಿದ್ಯಾರ್ಥಿಗಳಿಗೂ ಬೋಧನೆ ಮಾಡಬೇಕಾದ ಸವಾಲು ಇಲಾಖೆಯ ಮುಂದಿದೆ.

ADVERTISEMENT

ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 6,242 ವಿದ್ಯಾರ್ಥಿಗಳು ಈ ವರ್ಷ ದ್ವಿತೀಯ ಪಿಯುಸಿಯಲ್ಲಿದ್ದಾರೆ. ಆನ್‌ಲೈನ್‌ ತರಗತಿಗೆ ಬೇಕಾದ ಸೌಲಭ್ಯಗಳು (ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌/ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಇಂಟರ್‌ನೆಟ್) ಶೇ 60ರಷ್ಟು ವಿದ್ಯಾರ್ಥಿಗಳ ಬಳಿ ಇಲ್ಲ. ತೀರಾ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸಮಸ್ಯೆಯೂ ಇದೆ. ಇಂತಹ ಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಇದ್ದರೂ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ.

‘ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಸಮಸ್ಯೆಯಾಗುವುದಿಲ್ಲ. ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಆನ್‌ಲೈನ್‌ ಪಾಠಕ್ಕೆ ಸ್ವಲ್ಪ ಸಮಸ್ಯೆ ಆಗಬಹುದು. ಹಾಗಾಗಿ, ವಿದ್ಯಾರ್ಥಿಗಳನ್ನು ತಲುಪಲು ಬೇರೆ ವ್ಯವಸ್ಥೆ ಮಾಡಬೇಕಿದೆ’ ಎಂದು ಪಿಯು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ವಾರದಿಂದ ಪಾಠ: ‘ಒಂದು ವಾರದಿಂದ ದ್ವಿತೀಯ ಪಿಯುಸಿ ಮಕ್ಕಳಿಗೆ ಝೂಮ್‌ ಆ್ಯಪ್‌ ಮೂಲಕ ಆನ್‌ಲೈನ್‌ ಪಾಠಗಳನ್ನು ಆರಂಭಿಸಲಾಗಿದೆ. ಆಯಾ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಸಮಯ ನಿಗದಿ ಪಡಿಸಿ ಆನ್‌ಲೈನ್‌ ಮೂಲಕ ಪಾಠ ಮಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ ಅರ್ಧ ಗಂಟೆ ಬೋಧನೆ ಮಾಡಲು ಸೂಚಿಸಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಯುಟ್ಯೂಬ್‌ ಚಾನೆಲ್‌ ಮೂಲಕವೂ ಪಾಠ ಮಾಡಲು ನಿರ್ಧರಿಸಲಾಗಿದೆ. ಆಯಾ ವಿಷಯಗಳ ಉಪನ್ಯಾಸಕರು ಪಾಠ ಮಾಡುತ್ತಿರುವ ವಿಡಿಯೊವನ್ನು ಚಿತ್ರೀಕರಿಸಿ, ಯುಟ್ಯೂಬ್‌ ಚಾನೆಲ್‌ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಚಾನೆಲ್‌ಗೆ ಭೇಟಿ ನೀಡಿ ತಮಗೆ ಬೇಕಾದಾಗ ಪಾಠವನ್ನು ಕೇಳಬಹುದು’ ಎಂದು ಅವರು ಹೇಳಿದರು.

‘ಆನ್‌ಲೈನ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಮೂಲಕ ಪಾಠ ಮಾಡುವ ವ್ಯವಸ್ಥೆ ಕಾಲೇಜು ಆರಂಭವಾಗುವವರೆಗೆ ಮಾತ್ರ ಇರುತ್ತದೆ’ ಎಂದು ಕೃಷ್ಣಮೂರ್ತಿ ಅವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಭೇಟಿಗೆ ಸೂಚನೆ

ಆನ್‌ಲೈನ್‌, ಯುಟ್ಯೂಬ್‌ ಚಾನೆಲ್‌ ಪಾಠ ಕೇಳಲು ಸಾಧ್ಯವಿರದ ವಿದ್ಯಾರ್ಥಿಗಳನ್ನು ತಲುಪುವುದು ದೊಡ್ಡ ಸವಾಲು ಎಂದು ಡಿಡಿಪಿಯು ಕೃಷ್ಣಮೂರ್ತಿ ಅವರು ಒಪ್ಪಿಕೊಂಡರು.

‘ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿ ಸಾಮಾನ್ಯವಾಗಿ ಒಂದು ಊರಿನಲ್ಲಿ ತುಂಬ ಮಕ್ಕಳು ಇರುತ್ತಾರೆ. ಆದರೆ, ಪದವಿ ಕಾಲೇಜುಗಳಲ್ಲಿ ದೂರದ ಊರಿನಿಂದ ವಿದ್ಯಾರ್ಥಿಗಳು ಬರುತ್ತಿರುತ್ತಾರೆ. ಹಾಗಾಗಿ, ಎಲ್ಲರನ್ನೂ ಒಂದು ಕಡೆ ಸೇರಿಸುವುದು ಕಷ್ಟ. ಆನ್‌ಲೈನ್‌ ಪಾಠ ಕೇಳಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ನೇರವಾಗಿ ಸಂಪರ್ಕಿಸಿ, ಅವರು ಇರುವ ಊರುಗಳಿಗೆ ತೆರಳಿ ವಿವಿಧ ವಿಷಯಗಳನ್ನು ಅಭ್ಯಾಸ ಮಾಡುವ ಬಗೆಯನ್ನು ತಿಳಿಸಿಕೊಡಬೇಕು ಎಂದು ಉಪನ್ಯಾಸಕರಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

‘ಕಾಲೇಜು ಆರಂಭವಾಗುವವರೆಗೂ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರೂಪಿಸಿರುವ ಕಾರ್ಯಕ್ರಮಗಳಿವು. ಗರಿಷ್ಠ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸುತ್ತೇವೆ’ ಎಂದು ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.