ADVERTISEMENT

ಚಾಮರಾಜನಗರ: ಚೆಕ್‌ಪೋಸ್ಟ್‌ನಲ್ಲಿ ಭದ್ರತಾಲೋಪ, ಏಳು ಪೊಲೀಸ್‌ ಸಿಬ್ಬಂದಿ ಅಮಾನತು

ಚರ್ಚೆಗೆ ಗ್ರಾಸವಾದ ಜಿಲ್ಲಾಡಳಿತದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 15:23 IST
Last Updated 29 ಮಾರ್ಚ್ 2020, 15:23 IST
ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿರುವ ಚೆಕ್‌ಪೋಸ್ಟ್‌
ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿರುವ ಚೆಕ್‌ಪೋಸ್ಟ್‌   

ಚಾಮರಾಜನಗರ: ಮಂಗಳೂರಿನಲ್ಲಿದ್ದ ತಮಿಳುನಾಡಿನ 595 ಮೀನುಗಾರರು ಸೇರಿದಂತೆ ಹಲವು ಜನರನ್ನು ಹೆಗ್ಗವಾಡಿ ಹಾಗೂ ಪುಣಜನೂರು ಚೆಕ್‌ ಚೆಕ್‌ಪೋಸ್ಟ್‌ಗಳಲ್ಲಿ ಬಿಟ್ಟಿರುವ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಕಂದಾಯ ಇಲಾಖೆಯ ಆರು ಮಂದಿ ನೌಕರರನ್ನು ಅಮಾನತು ಮಾಡಿದ ಬೆನ್ನಲ್ಲೇ ಪೊಲೀಸ್‌ ಇಲಾಖೆಯೂ ಒಬ್ಬರು ಎಎಸ್‌ಐ ಸೇರಿದಂತೆ ಏಳು ಮಂದಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿದೆ.

ಗ್ರಾಮಾಂತರ ಪೊಲೀಸ್‌ ಠಾಣೆಯ ಎಎಸ್‌ಐ ಕೂಸಯ್ಯ, ಕಾನ್‌ಸ್ಟೆಬಲ್‌ಗಳಾದ ಸೈಯದ್‌ ರಫಿ, ಪ್ರಸಾದ, ಅಬ್ದುಲ್‌ ಖಾದರ್‌ (ಹೆಗ್ಗವಾಡಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದವರು) ರಾಮಸಮುದ್ರ ಪೊಲೀಸ್‌ ಠಾಣೆಯ ಮಹದೇವಸ್ವಾಮಿ, ಮಹೇಶ್‌ ಹಾಗೂ ಡಿವೈಎಸ್‌ಪಿ ಕಚೇರಿ ಸಿಬ್ಬಂದಿ ರೇವಣ್ಣ ಸ್ವಾಮಿ (ಪುಣಜನೂರು ಚೆಕ್‌ಪೋಸ್ಟ್‌ನಲ್ಲಿದ್ದವರು) ಅಮಾನತುಗೊಂಡವರು. ಈ ಕ್ರಮವು ಪೊಲೀಸ್‌ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.

ಕೊರೊನಾ ವೈರಸ್‌ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಂತರ ರಾಜ್ಯ ಹಾಗೂ ಅಂತರ ಜಿಲ್ಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಅವುಗಳ ನಿರ್ವಹಣೆಗೆ ಪೋಲಿಸ್‌ ಇಲಾಖೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನೂ ನಿಯೋಜಿಸಿದೆ. ಕಂದಾಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಈ ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಒದಗಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಇದೇ 27ರಂದು ಮಂಗಳೂರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ 595 ಮಂದಿ 27 ವಾಹನಗಳಲ್ಲಿ ಜಿಲ್ಲೆಯ ಮೂಲಕ ತಮಿಳುನಾಡು ಪ್ರವೇಶಿಸಿದ್ದರು. ಪುಣಜನೂರು ಚೆಕ್‌‍ಪೋಸ್ಟ್‌ ದಾಟಿದ ಬಳಿಕ ತಮಿಳುನಾಡಿನ ಹಾಸನೂರು ಚೆಕ್‌ಪೋಸ್ಟ್‌ನಲ್ಲಿ ಅಲ್ಲಿನ ಅಧಿಕಾರಿಗಳು ಅವರನ್ನು ತಡೆದಿದ್ದರು. ಇದರಿಂದಾಗಿ ಗೊಂದಲ ಉಂಟಾಗಿತ್ತು. ಜಿಲ್ಲಾಡಳಿತ, ತಮಿಳುನಾಡಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಎಲ್ಲ ಮೀನುಗಾರರು ಅವರ ಊರುಗಳಿಗೆ ತೆರಳಿದ್ದರು.

ಮಂಗಳೂರು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಲ್ಲಿನ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ನೀಡಿದ್ದ ಹೇಳಿಕೆಯ ದಾಖಲೆಯನ್ನು ಮೀನುಗಾರರು ಹೊಂದಿದ್ದರು. ಮಂಗಳೂರಿನಿಂದ ಜಿಲ್ಲೆಯವರೆಗೂ ಅವರನ್ನು ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ, ದಾಖಲೆಗಳನ್ನು ನೋಡಿ ಬಿಡಲಾಗಿತ್ತು. ಜಿಲ್ಲೆಯ ಚೆಕ್‌ಪೋಸ್ಟ್‌ಗಳಿಗೆ ಮೀನುಗಾರರು ಬಂದಾಗ, ಅಲ್ಲಿದ್ದ ಸಿಬ್ಬಂದಿ ನೋಡೆಲ್‌ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್‌ ಕಂಟ್ರೋಲ್‌ ರೂಂ ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೂಕ್ತ ದಾಖಲೆ ಇದ್ದರೆ ಬಿಡುವಂತೆ ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದರು ಎಂದು ಗೊತ್ತಾಗಿದೆ.

ಪುಣಜನೂರು ಚೆಕ್‌ಪೋಸ್ಟ್‌ ದಾಟಿ ಹಾಸನೂರು ಚೆಕ್‌ಪೋಸ್ಟ್‌ ತಲುಪಿದಾಗ ತಮಿಳುನಾಡಿನ ಅಧಿಕಾರಿಗಳು ಮೀನುಗಾರರನ್ನು ಒಳಕ್ಕೆ ಬಿಡಲಿಲ್ಲ. ನಂತರ ಅವರು ರಾಜ್ಯದ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಗೊಂದಲ ಉಂಟಾಯಿತು ಎಂದು ತಿಳಿದು ಬಂದಿದೆ.

ಅಲ್ಲಿನವರಿಗೆ ಇಲ್ಲದ ಶಿಕ್ಷೆ, ಇಲ್ಲಿಯವರಿಗೇಕೆ?

‘ಚೆಕ್‌ಪೋಸ್ಟ್‌ನ ನೇತೃತ್ವ ವಹಿಸಿದ್ದವರು ಕಂದಾಯ ಇಲಾಖೆಯ ಅಧಿಕಾರಿಗಳು. ಅವರ ಸೂಚನೆಯಂತೆ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಬಿಟ್ಟಿದ್ದಾರೆ. ಅವರು ಮಾಡಿರುವ ತಪ್ಪಿಗೆ ಕೆಳ ಹಂತದ ಸಿಬ್ಬಂದಿಗೆ ಶಿಕ್ಷೆ ಕೊಡುವುದು ಎಷ್ಟು ಸರಿ’ ಎಂಬ ಚರ್ಚೆ ಪೊಲೀಸರ ಆಂತರಿಕ ವಲಯದಲ್ಲಿ ನಡೆಯುತ್ತಿದೆ.

ಮಂಗಳೂರಿನಿಂದ ಜಿಲ್ಲೆಗೆ ಬರುವವರೆಗೆ ಹಲವು ಚೆಕ್‌ಪೋಸ್ಟ್‌ಗಳನ್ನು ದಾಟಿ ಬರಬೇಕು. ಅಲ್ಲೆಲ್ಲ ತಪಾಸಣೆ ನಡೆಸಿ, ದಾಖಲೆಗಳನ್ನು ನೋಡಿ ಸಿಬ್ಬಂದಿ ಬಿಟ್ಟಿದ್ದಾರೆ. ಅಲ್ಲಿವರಿಗೆ ಇಲ್ಲದ ಅಮಾನತು ಶಿಕ್ಷೆ ಇಲ್ಲಿನ ಸಿಬ್ಬಂದಿಗೆ ಎಂಬ ಪ್ರಶ್ನೆಯನ್ನೂ ಅವರು ಖಾಸಗಿಯಾಗಿ ಕೇಳುತ್ತಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.