ADVERTISEMENT

ಚಾಮರಾಜನಗರದಲ್ಲಿ ಯೋಗ ದಿನ: ಮಕ್ಕಳು, ಮಹಿಳೆಯರು ಹಿರಿಯರಿಂದ ಯೋಗಾಭ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 6:12 IST
Last Updated 21 ಜೂನ್ 2022, 6:12 IST
ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂದೆ ಯೋಗ ಮಾಡಿದ ಜನ
ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂದೆ ಯೋಗ ಮಾಡಿದ ಜನ   

ಚಾಮರಾಜನಗರ: ಜಿಲ್ಲೆಯಾದ್ಯಂತ ಮಂಗಳವಾರ 8ನೇ ಅಂತರರಾಷ್ಟ್ರೀಯ ಯೋಗ ದಿನವನ್ಜು ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು.

ಕೇಂದ್ರ ಆಯುಷ್ ಸಚಿವಾಲಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ನಿರತ ಸಂಘಗಳ ಸಹಯೋಗದಲ್ಲಿ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯ, ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣ, ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಯೋಗ ದಿನಾಚರಣೆ‌ ನಡೆಯಿತು.

ಜಿಲ್ಲಾ ಕೇಂದ್ರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ADVERTISEMENT

ನಂತರ, ನಡೆದ ಯೋಗಾಭ್ಯಾಸದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಆಯುಷ್ ಅಧಿಕಾರಿ‌ ಡಾ.ವಿ.ಸುಜಾತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ತಹಶೀಲ್ದಾರ್ ಬಸವರಾಜು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗಪಟುಗಳು, ಸಾರ್ವಜನಿಕರು, ವಿವಿಧ ಶಾಲಾ‌ಕಾಲೇಜುಗಳ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.

ನ್ಯಾಚುರೋಪಥಿ ಆಸ್ಪತ್ರೆ ವೈದ್ಯೆ ಡಾ.ಮಾನಸ ಹಾಗೂ ಯೋಗಪಟು ದೇವಿಕಾ ಅವರು ವೇದಿಕೆಯಲ್ಲಿ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.

ಇದಕ್ಕೂ ಮೊದಲು‌ ನಡೆದ ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ‌ ಚಾರುಲತಾ ಸೋಮಲ್ ಅವರು, 'ಪತಂಜಲಿ ಸೂತ್ರದ ಪ್ರಕಾರ, ಅಷ್ಟಾಂಗ ಯೋಗಗಳಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪಥ್ಯಾಹಾರ, ಧ್ಯಾನ, ಧಾರಣಾ ಹಾಗೂ ಸಮಾಧಿ ಎಂಬ ಎಂಟು ಅಂಶಗಳಿವೆ' ಎಂದು ಹೇಳಿದರು.

'ಕೇವಲ ಒಂದೇ ದಿನ ವ್ಯಾಯಾಮ, ಪ್ರಾಣಾಯಾಮ ಮಾಡುವುದು ಯೋಗ ಅಲ್ಲ. ಯಮ- ನಿಯಮದಿಂದ ಆರಂಭವಾಗಿ ಸಮಾಧಿಯವರೆಗೆ ಅದು ನಡೆಯಬೇಕು. ದಿನಚರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ‌ ನಾವು ಮಾಡುವ ಚಟುವಟಿಕೆಗಳಲ್ಲಿ ಯೋಗ ಇದೆ' ಎಂದರು.

'ಯೋಗ ದಿನಾಚರಣೆ ಒಂದು ದಿನದ ಆಸನಗಳ ಅಭ್ಯಾಸ, ಪ್ರಾಣಾಯಾಮಕ್ಕೆ ಮಾತ್ರ ಸೀಮಿತವಾಗಬಾರದು. ಯೋಗ ಜೀವನಕ್ಕೆ ಉಪಯೋಗವಾಗಬೇಕು. ನಮ್ಮ ಜೀವನವನ್ನು ಅದರಿಂದ ಹೇಗೆ ಸುಧಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು' ಎಂದು ಚಾರುಲತಾ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಚುರೋಪಥಿ ವೈದ್ಯೆ ಡಾ.ಮಾನಸ, 'ಜಗತ್ತಿಗೆ ಭಾರತ ನೀಡಿರುವ ಕೊಡುಗೆಗಳಲ್ಲಿ ಯೋಗವೂ ಒಂದು. ಯೋಗವು ಮಾನವನ ಭೌತಿಕ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಉನ್ನತಿಗೆ ಸಹಕಾರಿಯಾಗಿದೆ' ಎಂದರು.
'2015ರಿಂದ ಪ್ರತಿವರ್ಷ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇದು ಎಂಟನೇ ವರ್ಷದ ಯೋಗ ದಿನ. ಪ್ರತಿ ವರ್ಷವೂ ಒಂದೊಂದು ಧ್ಯೇಯವಾಕ್ಯ ಇಟ್ಟುಕೊಂಡು ಈ ದಿನ ಆಚರಿಸಲಾಗುತ್ತಿದ್ದು, ಈ ಬಾರಿ 'ಮಾನವೀಯತೆಗಾಗಿ ಯೋಗ' ಎಂಬ ಘೋಷ ವಾಕ್ಯ ನೀಡಲಾಗಿದೆ ಎಂದು ಹೇಳಿದರು.

ಶಾಲಾ ಕಾಲೇಜುಗಳಲ್ಲೂ ಯೋಗ: ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಯೋಗಭ್ಯಾಸ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.