ADVERTISEMENT

ಜಮೀನಿಗೆ ನುಗ್ಗಿ ಸಾಕು ನಾಯಿ ಹೊತ್ತೊಯ್ದ ಚಿರತೆ: ಆತಂಕ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:15 IST
Last Updated 22 ಆಗಸ್ಟ್ 2024, 16:15 IST

ಹನೂರು: ತಾಲ್ಲೂಕಿನ ಬಸವನಗುಡಿ ಬಳಿಯಿರುವ ರಾಜೇಂದ್ರನ್ ಅವರ ಜಮೀನಿಗೆ ಬುಧವಾರ ರಾತ್ರಿ ಚಿರತೆಯೊಂದು ನುಗ್ಗಿ ಸಾಕು ನಾಯಿಯನ್ನು ಎತ್ತಿಕೊಂಡು ಹೋಗಿದ್ದು, ಮನೆಮಂದಿ ಆತಂಕಕ್ಕೀಡಾಗಿದ್ದಾರೆ.

ಜಮೀನಿನ ಸುತ್ತಲೂ ಸೋಲಾರ್ ಅಳವಡಿಸಲಾಗಿದೆ. ಹೀಗಿದ್ದರೂ ನುಸುಳಿರುವ ಚಿರತೆ ಮನೆ ಮುಂದೆ ಮಲಗಿದ್ದ ಮೂರು ನಾಯಿಗಳ ಪೈಕಿ ಒಂದನ್ನು ಹೊತ್ತೊಯ್ದಿದೆ. ನಾಯಿಯ ಬೊಗಳುವುದನ್ನು ಕೇಳಿ ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ನಾಯಿಯನ್ನು ಎತ್ತಿಕೊಂಡು ಹೋಗಿದ್ದು ಗೊತ್ತಾಗಿದೆ. ಎರಡೂ ಬದಿಯಲ್ಲಿ ಅರಣ್ಯವಿರುವುದರಿಂದ ಈ ಭಾಗದಲ್ಲಿ ಪ್ರಾಣಿಗಳ ಓಡಾಟ ಜಾಸ್ತಿಇದೆ.

ಕಳೆದ ಐದಾರು ತಿಂಗಳಿನಿಂದಲೂ ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿವೆ, ಆದರೆ ಇದುವರೆಗೆ ಮನೆ ಹತ್ತಿರ ಬಂದಿರಲಿಲ್ಲ. ಈಗ ಮನೆ ಬಳಿ ಬಂದು ನಾಯಿಯನ್ನು ಎತ್ತಿಕೊಂಡು ಹೋಗಿರುವುದರಿಂದ ಆತಂಕ ಶುರುವಾಗಿದೆ. ಮನೆಯ ಸಮೀಪವೇ ಶಾಲೆಯಿದೆ. ರಾತ್ರಿ ಬರುವ ಚಿರತೆ ಬೆಳಗಿನ ಸಮಯದಲ್ಲಿ ಬಂದರೆ ಏನು ಗತಿ? ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆಹಿಡಿದು ಬೇರೆಡೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಬಸವನಗುಡಿ ಗ್ರಾಮದ ರಾಜೇಂದ್ರನ್ ಅವರ ಜಮೀನಿಗೆ ಚಿರತೆ ಬಂದು ಸಾಕುನಾಯಿಯನ್ನು ಹೊತ್ತೊಯ್ದಿರುವ ವಿಚಾರ ತಿಳಿದಿದೆ. ಸ್ಥಳಕ್ಕೆ ಸ್ಥಳೀಯ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಜಮೀನಿನಲ್ಲಿ ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ವಹಿಸಲಾಗುವುದು ಎಂದು ಮಲೆಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.