ಸಂತೇಮರಹಳ್ಳಿ: ‘ಭಾರತದ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ’ ಎಂದು ಲೋಟಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷ ತಿಳಿಸಿದರು.
ಇಲ್ಲಿನ ಲೋಟಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಾರತದ ಹಲವಾರು ಭಾಷೆಗಳಲ್ಲಿ ಎರಡನೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಲಿನಲ್ಲಿ ಕನ್ನಡ ಬಾಷೆ ವಿಜೃಂಬಿಸುತ್ತಿದೆ. ಭಾರತದ ಪ್ರಾಚೀನ ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಅನೇಕ ಮೇರು ಕೃತಿಗಳನ್ನು ಕೊಡುಗೆಯಾಗಿ ನೀಡಿದೆ. ಹಲವಾರು ಕವಿಗಳು, ದಾರ್ಶನಿಕರು ಹಾಗೂ ಸಾಹಿತಿಗಳು ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಇಂತಹ ಸಿರಿವಂತಿಕೆ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಕನ್ನಡಿಗರ ಪಾತ್ರ ಬಹಳ ಮುಖ್ಯವಾಗಿದೆ. ಭಾಷಾ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
‘ಭಾರತ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಹಿನ್ನೆಲೆಯಲ್ಲಿ ದೇಶ ಕಂಡಂತಹ ಮಹಾನ್ ನಾಯಕರ ಆದರ್ಶ ಹಾಗೂ ಅವರ ಸದ್ಗುಣಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು’ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಹೋರಾಟಗಾರರ ವೇಷ ಹಾಕಿ ಗಮನ ಸೆಳೆಯಲಾಯಿತು. ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯಶಿಕ್ಷಕ ಶಿವಕುಮಾರ್, ಸಹ ಶಿಕ್ಷಕರಾದ ನಾಗರಾಜು, ಆಶ್ವಿನಿ, ನಂದಿನಿ, ಪದ್ಮಾವತಿ, ಸೌಮ್ಯ, ಮಾದಲಾಂಬಿಕೆ, ನಿರ್ಮಿತಾ, ಮಾನಸ ಶಿಲ್ಪ, ನಿರ್ಮಲಾ, ರಾಜೇಶ್ವರಿ, ಲೀಲಾವತಿ, ರೋಜಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.