
ಚಾಮರಾಜನಗರ: ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಗಮನ ಸೆಳೆದಿದ್ದ ಶ್ರೇಷ್ಠ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ದೇಶದ ಇತಿಹಾಸದಲ್ಲಿ 12ನೇ ಶತಮಾನ ಪರಿವರ್ತನೆಯ ಹಾಗೂ ಹೊಸ ಆಲೋಚನೆಯ ಕಾಲಘಟ್ಟವಾಗಿತ್ತು. ಬಸವಣ್ಣನವರು ರಚಿಸಿದ ಅನುಭವ ಮಂಟಪದಲ್ಲಿ ಎಲ್ಲ ವರ್ಗಗಳ ಜನರು ಒಗ್ಗೂಡಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು. ಅನುಭವ ಮಂಟಪದಲ್ಲಿದ್ದ ಶಿವಶರಣರು ಅಂದಿನ ಕಾಲದಲ್ಲಿ ಮೂಢನಂಬಿಕೆ, ಅಜ್ಞಾನ, ಕಂದಾಚಾರಗಳನ್ನು ತೊಡೆದುಹಾಕಲು ಯತ್ನಿಸಿದರು.
ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜವನ್ನು ತಿದ್ದುವ ಹಾಗೂ ಎಚ್ಚರಿಸುವ ಕೆಲಸವನ್ನು ಮಾಡಿದರು. 12ನೇ ಶತಮಾನದ ಶ್ರೇಷ್ಠ ಶಿವಶರಣರಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು ಎಂದರು.
ಅಂಬಿಗರ ಚೌಡಯ್ಯ ದೋಣಿ ನಡೆಸುವ ಕಾಯಕ ಮಾಡುತ್ತಲೇ ಬಸವಣ್ಣನವರು ಪ್ರತಿಪಾದಿಸಿದ ಕಾಯಕವೇ ಕೈಲಾಸ ತತ್ವವನ್ನು ಕಾಯಾ, ವಾಚಾ, ಮನಸಾ ಅನುಸರಿಸುತ್ತಿದ್ದರು. ಇದನ್ನು ಮನಗಂಡಿದ್ದ ಬಸವಣ್ಣನವರು ಅಂಬಿಗರ ಚೌಡಯ್ಯ ಅವರನ್ನು ಭವಸಾಗರದ ಹುಟ್ಟನ್ನು ದಾಟಿದವರು ಎಂದು ಆಗಾಗ ಅನುಭವ ಮಂಟಪದಲ್ಲಿ ಸ್ಮರಿಸಿಕೊಳ್ಳುತ್ತಿದ್ದರು.
ಅಂಬಿಗರ ಚೌಡಯ್ಯ ಅವರ ಮೌಲ್ಯಯುತ ವಚನಗಳ ಸಾರವನ್ನು ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಸಲಹೆ ನೀಡಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಜಯಣ್ಣ ಮಾತನಾಡಿ 12 ಶತಮಾನದ ಶ್ರೇಷ್ಠ ವಚನಕಾರರಾಗಿದ್ದ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕ ಚಿಂತನೆಗಳು, ನೈತಿಕ ಮೌಲ್ಯಗಳು ತುಂಬಿರುವುದನ್ನು ಕಾಣಬಹುದು. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ ಅಂಬಿಗರ ಚೌಡಯ್ಯ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮೂಡಿಸಿದರು. ಜನರನ್ನು ಉತ್ತಮ ಚಿಂತನೆಗಳೆಡೆಗೆ ಕೊಂಡೊಯ್ದರು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಮುಖಂಡರಾದ ಸಿ.ಸಿ.ಪ್ರಕಾಶ್, ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಅನುಭವ ಮಂಟಪದಲ್ಲಿ ಪುರುಷರು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಲಾಗಿತ್ತು. ಬಸವಣ್ಣನವರ ಕಾಲದಲ್ಲೇ ಸ್ತ್ರೀ ಸಬಲೀಕರಣಕ್ಕೆ ಒತ್ತು ಸಿಕ್ಕಿತ್ತು. ಮೂಢನಂಬಿಕೆ ಪ್ರಾಣಿ ಬಲಿ ಯಜ್ಞಯಾಗಾದಿಗಳಲ್ಲಿ ಮುಳುಗಿದ್ದ ಅಂದಿನ ಜನರಿಗೆ ಶಿವಶರಣರು ಶ್ರೇಷ್ಠ ಚಿಂತನೆಗಳ ಮೂಲಕ ದೇವರ ಅಸ್ತಿತ್ವದ ಹೊಸ ಕಲ್ಪನೆ ನೀಡಿದ್ದರು. ಅಂಬಿಗರ ಚೌಡಯ್ಯ ರಚಿಸಿದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಅಜ್ಞಾನ ಅಂಧಕಾರದಿಂದ ಉತ್ತಮ ಮಾರ್ಗದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ. ವಿದ್ಯಾರ್ಥಿಗಳು ಶಿವಶರಣರ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಅಂಬಿಗರ ಚೌಡಯ್ಯ 270 ರಿಂದ 300 ವಚನಗಳನ್ನು ರಚಿಸಿದ್ದಾರೆ ಎಂದು ಪ್ರೊ.ಜಯಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.