ADVERTISEMENT

ಕಸ ಸಂಗ್ರಹಕ್ಕೆ ಹೆಚ್ಚುವರಿ ವಾಹನ

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 21 ವಾಹನಗಳ ಖರೀದಿ, ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ

ಸೂರ್ಯನಾರಾಯಣ ವಿ
Published 6 ಏಪ್ರಿಲ್ 2020, 19:45 IST
Last Updated 6 ಏಪ್ರಿಲ್ 2020, 19:45 IST
ಜಿಲ್ಲಾಡಳಿತ ಭವನದಲ್ಲಿ ನಿಲ್ಲಿಸಲಾಗಿರುವ ಕಸ ಸಂಗ್ರಹಿಸುವ ಹೊಸ ವಾಹನಗಳು
ಜಿಲ್ಲಾಡಳಿತ ಭವನದಲ್ಲಿ ನಿಲ್ಲಿಸಲಾಗಿರುವ ಕಸ ಸಂಗ್ರಹಿಸುವ ಹೊಸ ವಾಹನಗಳು   

ಚಾಮರಾಜನಗರ: ಜಿಲ್ಲೆಯಲ್ಲಿರುವ ಎರಡು ನಗರಸಭೆಗಳು ಸೇರಿದಂತೆ ಐದು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯನ್ನು ಇನ್ನಷ್ಟು ಸಮರ್ಪಕವಾಗಿಸಲು ಹೆಚ್ಚುವರಿಯಾಗಿ ಕಸ ಸಂಗ್ರಹ ವಾಹನಗಳು ಸಿಗಲಿವೆ.

ನಗರಾಭಿವೃದ್ಧಿ ಇಲಾಖೆಯು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ 21 ಕಸ ಸಂಗ್ರಹ ವಾಹನಗಳನ್ನು ಖರೀದಿಸಿದ್ದು, ಈಗಾಗಲೇ 12 ವಾಹನಗಳು ಜಿಲ್ಲಾ ಕೇಂದ್ರಕ್ಕೆ ಬಂದಿವೆ. ಉಳಿದ ಒಂಬತ್ತು ವಾಹನಗಳು ಶೀಘ್ರದಲ್ಲಿ ಬರಲಿವೆ ಎಂದು ಜಿಲ್ಲಾ ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರದ ಇ–ಮಾರ್ಕೆಟ್‌ (ಜೆಇಎಮ್‌) ಪೋರ್ಟಲ್‌ ಮೂಲಕ ನೇರವಾಗಿ ವಾಹನವೊಂದಕ್ಕೆ ₹6.5 ಲಕ್ಷ ನೀಡಿ 21 ವಾಹನಗಳನ್ನು ಖರೀದಿಸಲಾಗಿದೆ. ಇದಕ್ಕೆ ₹1.36 ಕೋಟಿ ವೆಚ್ಚವಾಗಿದೆ.ಇವು ಅಶೋಕ್‌ ಲೇಲ್ಯಾಂಡ್‌ನ ದೋಸ್ತ್‌ ವಾಹನಗಳಾಗಿದ್ದು,ಹಿಂಭಾಗದಲ್ಲಿ ಕಸ ಸಂಗ್ರಹಿಸುವ ದೊಡ್ಡ ಪೆಟ್ಟಿಗೆಯನ್ನೂ ಅಳವಡಿಸಲಾಗಿದೆ. ಈ ಪೆಟ್ಟಿಗೆಯಲ್ಲಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಪ್ರತ್ಯೇಕ ವಿಭಾಗಗಳಿವೆ. ಒಣ ಕಸ ಹಾಕಲು ಶೇ 70ರಷ್ಟು ಜಾಗ ಮೀಸಲಾಗಿದ್ದರೆ, ಹಸಿ ಕಸಕ್ಕಾಗಿ ಶೇ 30ರಷ್ಟು ಸ್ಥಳಾವಕಾಶ ಇದೆ.

ADVERTISEMENT

ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಾದಚಾಮರಾಜನಗರ ನಗರಸಭೆ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು ಪಟ್ಟಣ ಪಂಚಾಯಿತಿ ಹಾಗೂ ಹನೂರು ಪಟ್ಟಣ ಪಂಚಾಯಿಗಳಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ವಾಹನಗಳ ಕೊರತೆಯನ್ನು ಎದುರಿಸುತ್ತಿವೆ. ವಾಹನಗಳು ಕಡಿಮೆ ಇರುವುದರಿಂದ ಸಿಬ್ಬಂದಿಗೆ ಪ್ರತಿ ದಿನ ಎಲ್ಲ ವಾರ್ಡ್‌ಗಳಿಂದ ಕಸ ಸಂಗ್ರಹಿಸುವುದಕ್ಕೆ ಆಗುತ್ತಿಲ್ಲ.

ಕಸ ಸಂಗ್ರಹಣೆಗೆ ಅನುಕೂಲ

ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಎರಡು–ಮೂರು ದಿನಗಳಿಗೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ ಒಂದೇ ವಾಹನವಿದ್ದು, ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು ಸಾಧ್ಯವಾಗದ ಸ್ಥಿತಿ ಇದೆ.

21 ವಾಹನಗಳ ಪೈಕಿ ಐದು ವಾಹನಗಳನ್ನು ಚಾಮರಾಜನಗರ ನಗರಸಭೆಗೆ, ಕೊಳ್ಳೇಗಾಲಕ್ಕೆ ಆರು, ಗುಂಡ್ಲುಪೇಟೆಗೆ ಐದು, ಯಳಂದೂರಿಗೆ ಎರಡು ಮತ್ತು ಹನೂರು ಪಟ್ಟಣ ಪಂಚಾಯಿತಿಗೆ ಮೂರು ವಾಹನಗಳನ್ನು ಜಿಲ್ಲಾಡಳಿತ ಹಂಚಿಕೆ ಮಾಡಲಿದೆ.

‘ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಗೆ ತುರ್ತಾಗಿ ವಾಹನಗಳ ಅವಶ್ಯಕತೆ ಇದೆ ಎಂಬ ಕಾರಣಕ್ಕೆ, ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಸರ್ಕಾರದ ಇ–ಮಾರ್ಕೆಟ್‌ ಪೋರ್ಟಲ್‌ ಮೂಲಕ ವಾಹನಗಳನ್ನು ಖರೀದಿಸಲಾಗಿದೆ. ಮೂಲದಲ್ಲೇ ಪ್ರತ್ಯೇಕಿಸಲಾಗಿರುವ ಹಸಿ ಕಸ ಮತ್ತು ಒಣ ಕಸವನ್ನು ಸಂಗ್ರಹಿಸಲು ವಾಹನದಲ್ಲಿ ಪ್ರತ್ಯೇಕ ವಿಭಾಗಗಳನ್ನೂ ಮಾಡಲಾಗಿದೆ’ ಎಂದುಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿ ವಾಹನಗಳಿಂದಾಗಿ ಎಲ್ಲ ಕಡೆ ಕಸ ಸಂಗ್ರಹಣೆ ಇನ್ನಷ್ಟು ಸರಾಗವಾಗಲಿದೆ.ಎಲ್ಲ ವಾಹನಗಳು ಬಂದ ನಂತರ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.