ಚಾಮರಾಜನಗರ: ‘ಆಧುನಿಕ ಭಾರತದ ರೂಪುರೇಷೆ ಬದಲಿಸುವುದರಲ್ಲಿ ವಕೀಲರ ಪಾತ್ರ ಹಿರಿದಾಗಿದ್ದು, ಇದರ ಘನತೆ ಸಂರಕ್ಷಿಸುವ ಹೊಣೆ ವಕೀಲರ ಮೇಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ದಿನಗಳಲ್ಲಿ ವಕೀಲ ಸುದೀರ್ಘಅಧ್ಯಯನ ನಡೆಸದೆ ಇರುವುದರಿಂದ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಆದರೆ, ವಕೀಲ ವೃತ್ತಿಗೆ ತನ್ನದೇ ಆದ ಗೌರವವಿದೆ. ಈ ಗೌರವ, ಘನತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ವಕೀಲರ ಮೇಲಿದೆ’ ಎಂದು ಸಲಹೆ ನೀಡಿದರು.
‘ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಸರ್ವಶ್ರೇಷ್ಠ. ವಕೀಲರು ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ವೃತ್ತಿ ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಿಸಬಹುದು. ಆಳವಾದ ಅಧ್ಯಯನ ಮಾಡುವ ಮೂಲಕ ಕಕ್ಷೀದಾರರಿಗೆ ನ್ಯಾಯ ದೊರೆಕಿಸಿಕೊಡುವ ಅವಶ್ಯಕತೆ ವಕೀಲರಿಗೆ ಇದೆ’ ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿನಯ್ ಮಾತನಾಡಿ, ‘ವಕೀಲರ ಯಶಸ್ಸಿನ ಹಾದಿಗೆ ಧೈರ್ಯ, ಆತ್ಮವಿಶ್ವಾಸ, ಶ್ರದ್ಧೆ, ಕಾನೂನಿಗೆ ಸಂಬಂಧಿಸಿದ ತರ್ಕ ಈ ಪ್ರಮುಖ ಅಂಶಗಳು ಕಾರಣವಾಗಿವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಎಲ್ಲ ವಕೀಲ ಸಮುದಾಯದ ಆದ್ಯ ಕರ್ತವ್ಯ’ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ‘ಸ್ವಾತಂತ್ರ್ಯಪೂರ್ವದಿಂದಲೂ ವಕೀಲರು ಮಹತ್ವದ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಬಂದಿದ್ದಾರೆ.ದೇಶದಪ್ರಥಮ ರಾಷ್ಟ್ರಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಅಂಗವಾಗಿ ವಕೀಲರ ದಿನವನ್ನು ಅಚರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶೀ ಸಿ.ಜಿ.ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಶಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದಸ್ಮಿತಾ, ಹಿರಿಯ ವಕೀಲ ಪುಟ್ಟರಾಜು, ಕೆ.ಎಂ.ಶ್ರೀನಿವಾಸಮೂರ್ತಿ, ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ, ಉಷಾ, ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೀಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಂ. ಶಿವರಾಮು, ಪ್ರಧಾನ ಕಾರ್ಯದರ್ಶಿ ಎಸ್.ಮಂಜು, ಜಂಟಿ ಕಾರ್ಯದರ್ಶಿ ಬಿ.ಮಂಜು, ಖಜಾಂಚಿ ನಾಗಮ್ಮ, ಎಸ್.ಜಿ.ಮಹಾಲಿಂಗಸ್ವಾಮಿ ಇದ್ದರು.
ಜೀವನ ಕಟ್ಟಿಕೊಡುವ ವಕೀಲರು
‘ಸಮಾಜದಲ್ಲಿ ಸಾರ್ವಜನಿಕರ ಜೀವನಕ್ಕೆ ಸಂಬಂಧಪಟ್ಟಂತೆ ನಮ್ಮನ್ನು, ನ್ಯಾಯಾಧೀಶರನ್ನು ದೇವರ ಪ್ರತಿನಿಧಿ ಎನ್ನುತ್ತಾರೆ. ದೇವರು ಮತ್ತು ಕಕ್ಷಿದಾರರ ನಡುವೆ ವಕೀಲರು ಇರುತ್ತಾರೆ. ಅದೇ ರೀತಿ ಜೀವವನ್ನು ಉಳಿಸುವ ವೈದ್ಯರನ್ನು ದೇವರು ಎಂದು ಕರೆಯುತ್ತಾರೆ. ಆದರೆ, ವಕೀಲರು ಜೀವನವನ್ನುಕಟ್ಟಿಕೊಡುತ್ತಾರೆ’ ಎಂದುಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೇಶ್ ಹೇಳಿದರು.
ಬದುಕಿನ ಕೊಳಲು: ‘ಎಲ್‌ಎಲ್‌ಬಿ ಪದವಿಯ ಸರ್ಟಿಫಿಕೇಟ್ ಕೈಗೆ ಸಿಕ್ಕದ ತಕ್ಷಣ ವಕೀಲರಾಗಲು ಸಾಧ್ಯವಿಲ್ಲ. ಈ ಪದವಿ ಎನ್ನುವುದು ಕೊಳಲು ಇದ್ದಂತೆ. ಅದನ್ನು ನುಡಿಸುವುದನ್ನು ಕಲಿತರೆ ಮಾತ್ರ ಅದಕ್ಕೊಂದು ಬೆಲೆ ಸಿಗುತ್ತದೆ. ಬದುಕಿನ ಕೊಳಲನ್ನು ಪರಿಶ್ರಮದಿಂದ ನುಡಿಸುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.
‘ಸಾಮಾಜಿಕ ಜಾಲತಾಣಗಳಿಗೆ ಜೋತುಬಿದ್ದು ಆಳವಾದ ಅಧ್ಯಯನಕ್ಕೆಆದ್ಯತೆನೀಡುತ್ತಿಲ್ಲ. ಪರಿಶ್ರಮ ಕಡಿಮೆಯಾಗುತ್ತಿದೆ. ಆರ್ಡರ್ ಮಾಡಿದರೆಎಲ್ಲವೂ ಕಚೇರಿಗೆ ಬರಬೇಕು ಎನ್ನುವ ಮನೋಭಾವ ಹೊಂದಿದ್ದಾರೆ. ಇಂತಹ ವ್ಯಾಮೋಹ ಬಿಡಬೇಕು. ವಕೀಲರು ತಮ್ಮ ವೃತ್ತಿ ಜೀವನದ ಜೊತೆ ಸಾಮಾಜಿಕ ಚಿಂತನೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.