ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮಂಗಳವಾರ ವಿವಿಧ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ನಗರದ ಪ್ರಗತಿ ನಗರ ಬಡಾವಣೆಯಲ್ಲಿ ₹ 4.11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಕಟ್ಟಡವನ್ನು ಉದ್ಘಾಟಿಸಿದರು.
ನಂತರ ಗಾಳಿಪುರ ರಿಂಗ್ ರಸ್ತೆಯಲ್ಲಿರುವ ವಿದ್ಯುತ್ ಸ್ಟೇಷನ್ ಹತ್ತಿರ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯ ಪಾಲಿ ಕ್ಲಿನಿಕ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಪಾಲಿ ಕ್ಲಿನಿಕ್ ಕೇಂದ್ರದಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ನಗರದ ಹೊರವಲಯದ ಯಡಬೆಟ್ಟದ ಬಳಿ 80 ಎಕರೆ ಪ್ರದೇಶದಲ್ಲಿ ₹ 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೃಷಿ ಮಹಾವಿದ್ಯಾಲಯದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಗ್ರಂಥಾಲಯ ಕಟ್ಟಡಗಳನ್ನು ಉದ್ಘಾಟಿಸಿದರು.
ಇದೇವೇಳೆ ಮಾತನಾಡಿದ ಸಚಿವರು ‘ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾದ ₹ 40 ಕೋಟಿ ಅನುದಾನದ ಪೈಕಿ ಬಿಡಗಡೆಯಾದ ₹ 30 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಶೀಘ್ರ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಹಾಗೂ ಕೃಷಿ ತರಬೇತಿ ಕೇಂದ್ರಗಳ ಕಾಮಗಾರಿ ನಡೆಯಲಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಮಂಜೂರಾತಿ ನೀಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಬಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ, ಕೃಷಿಯ ಬಗ್ಗೆ ತರಬೇತಿ ಪಡೆಯಲು ಕೃಷಿ ವಿಶ್ವವಿದ್ಯಾಲಯ ನೆರವಾಗಲಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಚಾಮರಾಜನಗರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಇಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಫಿಸಲು ಹಿಂದೆ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಸಂಸದ ಆರ್. ಧ್ರುವನಾರಾಯಣ್ ಶ್ರಮಿಸಿದ್ದರು. 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ವಿ.ವಿ ಸ್ಥಾಪನೆಗೆ ಅನುಮೋದನೆ ನೀಡಿದರು. ಜಿಲ್ಲೆಯ ರೈತರಿಗೆ ಮಣ್ಣು ಪರೀಕ್ಷೆ ಮಾಡಿಸಲು, ವಿವಿಧ ಬಗೆಯ ಕೃಷಿ ಬೆಳೆಗಳನ್ನು ಬೆಳೆಯಲು ಕೃಷಿ ವಿವಿಯಿಂದ ಉಪಯುಕ್ತ ಮಾಹಿತಿ ಸಿಗಲಿದೆ ಎಂದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಅಮಚವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೇಜಸ್ವಿನಿ, ಜಿಲ್ಲಾ ಪಂಚಾಯಿಸಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೃಷಿ ವಿವಿ ವಿಶೇಷಾಧಿಕಾರಿ ಡಾ.ಸಿ. ದೊರೆಸ್ವಾಮಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಕಿ ಹಿತಾ ಜಿ.ಸುವರ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಸೋಮೇಶ್ವರ್ ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.