ADVERTISEMENT

ಬಂಡವಾಳಶಾಹಿ ಪರ ನೀತಿ: ಆಕ್ರೋಶ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 3:01 IST
Last Updated 27 ನವೆಂಬರ್ 2025, 3:01 IST
ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು
ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಭುವನೇಶ್ವರಿ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಟನಾಕಾರರು ‘ಕಾರ್ಮಿಕರ, ದುಡಿಯುವ ವರ್ಗಗಳ ವಿರೋಧದ ನಡುವೆಯೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿರುವುದು ಖಂಡನೀಯ. ಹೊಸ ಕಾರ್ಮಿಕ ಸಂಹಿತೆಗಳು ಬಂಡವಾಳಶಾಹಿಗಳ ಪರವಾಗಿದ್ದು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿಯಲ್ಲಿ ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಕಾರ್ಖಾನೆಗಳನ್ನು ಮುಚ್ಚಲು ಸರ್ಕಾರದ ಅನುಮತಿ ಅಗತ್ಯವಿರುವ ಸಂಸ್ಥೆಗಳ ಗಾತ್ರವನ್ನು ಹೆಚ್ಚಿಸಿರುವುದು ಕಾರ್ಮಿಕ ವಿರೋಧಿ ನಿಲುವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಕಾರ್ಮಿಕರನ್ನು ಕೆಲಸದಿಂದ ಕಿತ್ತು ಬೀದಿಗೆ ತಳ್ಳಲು ಸುಲಭವಾಗುತ್ತದೆ. ಉದ್ಯೋಗ ಭದ್ರತೆ ಇಲ್ಲದೆ ಕಾರ್ಮಿಕರು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ದೂರಿದರು.

ADVERTISEMENT

‘ಮುಷ್ಕರಕ್ಕೆ ಹೋಗುವ 14 ದಿನಗಳ ಮುಂಚೆ ಕಾರ್ಮಿಕರು ನೋಟಿಸ್ ನೀಡುವುದನ್ನು ಕಡ್ಡಾಯಗೊಳಿಸಿರುವುದು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡಂತೆ. ಇದರಿಂದ ಮಾಲೀಕರ ಶೋಷಣೆ, ದಬ್ಬಾಳಿಕೆಯ ವಿರುದ್ಧ ದನಿ ಎತ್ತುವುದು ಕಷ್ಟವಾಗುತ್ತದೆ’ ಎಂದರು.

‘ವೇತನ ಸಂಹಿತೆಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ಬದಲಾವಣೆ ಮಾಡಲಾಗಿದ್ದು ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಆತಂಕ ಎದುರಾಗಿದೆ. ಇದರಿಂದ ಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಕಾರ್ಮಿಕರನ್ನು ವಜಾ ಮಾಡಲು ಕಾರ್ಪೊರೆಟ್ ಕಂಪೆನಿಗೆಳಿಗೆ ಸುಲಭ ಮಾರ್ಗ ತೋರಿದಂತಾಗಿದೆ’ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ಕರ್ನಾಟಕ ಸಹಿತ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲೂ ವಿರೋಧ ಮಾಡದಿರುವುದು ಕಾರ್ಮಿಕ ವಿರೋಧಿ ನಿಲುವು ಎಂಬುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಎಐಯುಟಿಯುಸಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ್ ಮೇಟಿ, ಜಿಲ್ಲಾ ಸಂಚಾಲಕ ಪುಟ್ಟರಾಜು, ಸದಸ್ಯರಾದ, ಆಕಾಶ್ ಕುಮಾರ್, ಸಿಮ್ಸ್ ವರ್ಕರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಹದೇವು, ಬಣ್ಣಾರಿ ಅಮ್ಮನ್ ಶುಗರ್ಸ್ ಯೂನಿಯನ್ ಅಧ್ಯಕ್ಷ ಭೃಂಗೇಶ್, ಕುಮಾರ್, ಬೀರೇಗೌಡ, ಹರೀಶ್, ರಾಜಶೇಖರ್, ಕೃಷ್ಣಮೂರ್ತಿ ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.