ಅಕ್ಕ ಕೆಫೆ ಬ್ರಾಂಡ್ ಬೆಂಗಳೂರು ವರದಿಗಾಗಿ ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಚಾಮರಾಜನಗರ: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಆಹಾರ ಉದ್ಯಮ ಕ್ಷೇತ್ರದಲ್ಲಿ ಸ್ತ್ರೀಯರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶದಿಂದ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಜೊತೆಗೂಡಿ ರಾಜ್ಯದಾದ್ಯಂತ ಅಕ್ಕ ಕೆಫೆಗಳನ್ನು ತೆರೆಯುತ್ತಿದ್ದು ಜಿಲ್ಲೆಯಲ್ಲೂ ಅಕ್ಕ ಕೆಫೆ ಶೀಘ್ರ ಆರಂಭವಾಗಲಿದೆ.
ರಾಜ್ಯ ಸರ್ಕಾರ ಜಿಲ್ಲೆಗೆ ಎರಡು ಅಕ್ಕ ಕೆಫೆಗಳನ್ನು ಮಂಜೂರು ಮಾಡಿದ್ದು ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಸಂಜೀವಿನಿ ಒಕ್ಕೂಟದ ಉಸ್ತುವಾರಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಸಂತೆಯ ಪಕ್ಕದ ಜಾಗದಲ್ಲಿರುವ ಕಟ್ಟಡದಲ್ಲಿ ಜಿಲ್ಲೆಯ ಮೊದಲ ಅಕ್ಕ ಕೆಫೆ ಆರಂಭಿಸಲು ಸಿದ್ಧತೆ ನಡೆದಿದೆ.
ಈಗಾಗಲೇ ₹ 2.6 ಲಕ್ಷ ವೆಚ್ಚದಲ್ಲಿ ಹೋಟೆಲ್‌ನ ನವೀಕರಣ ಕಾರ್ಯ ನಡೆದಿದ್ದು ಆಹಾರ ಪದಾರ್ಥಗಳ ತಯಾರಿಕೆಗೆ ಬೇಕಾದ ಪಾತ್ರೆ, ಪರಿಕರಗಳನ್ನು ಖರೀದಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಉಳಿಕೆ ಅನುದಾನ ಬಳಸಿಕೊಂಡು ಒಟ್ಟು ₹ 5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಅಕ್ಕ ಕೆಫೆ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶೃತಿ ಮಾಹಿತಿ ನೀಡಿದರು.
ಅಕ್ಕ ಕೆಫೆಯನ್ನು ಸಂಪೂರ್ಣವಾಗಿ ಸ್ವಸಹಾಯ ಸಂಘಗಳ ಮಹಿಳೆಯರೇ ನಿರ್ವಹಣೆ ಮಾಡಲಿದ್ದು ಅಡುಗೆ ಸಿಬ್ಬಂದಿ, ಸಹಾಯಕರು ಹಾಗೂ ಹೋಟೆಲ್ ಉಸ್ತುವಾರಿಗಳು ಸಹ ಸ್ತ್ರೀಯರೇ ಇರಲಿದ್ದಾರೆ. ತೆರಕಣಾಂಬಿಯಲ್ಲಿ ಕೆಫೆ ಮುನ್ನಡೆಸಲು ಲಕ್ಷ್ಮಿದೇವಿ ಸ್ವಸಹಾಯ ಸಂಘ ಹಾಗೂ ವಿನಾಯಕ ಸ್ವಸಹಾಯ ಸಂಘಗಳು ಅರ್ಜಿ ಹಾಕಿವೆ.
ಈಚೆಗಷ್ಟೆ ಎರಡೂ ಸ್ವಸಹಾಯ ಸಂಘಗಳು ತಯಾರಿಸಿದ ಅಡುಗೆಯನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸಿದ್ದು, ಸರ್ಕಾರದ ಮಾನದಂಡಗಳು ಹಾಗೂ ಅರ್ಹತೆಯನ್ನು ಪೂರೈಸುವ ಒಂದು ಸಂಘಕ್ಕೆ ಕೆಫೆ ನಡೆಸಲು ಅವಕಾಶ ನೀಡಲಾಗುವುದು. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲೂ ‘ಅಕ್ಕ ಕೆಫೆ’ ತೆರೆಯಲು ಸರ್ಕಾರ ಅನುಮತಿ ನೀಡಿದೆ.
ಆದರೆ, ಸೂಕ್ತ ಸ್ಥಳ ಹಾಗೂ ಕಟ್ಟಡ ಲಭ್ಯವಾಗಿಲ್ಲ. ಶೀಘ್ರ ಎಂಎಂ ಹಿಲ್ಸ್‌ನಲ್ಲೂ ಕೆಫೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶೃತಿ ಮಾಹಿತಿ ನೀಡಿದರು.
ಅಕ್ಕ ಕೆಫೆಯಲ್ಲಿ ಸಾರ್ವಜನಿಕರಿಗೆ ಶುಚಿ–ರುಚಿ ಹಾಗೂ ಗುಣಮಟ್ಟದ ಆಹಾರ ದೊರೆಯಲಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಕಾಫಿ, ಟೀ, ಸ್ನ್ಯಾಕ್ಸ್ ದೊರೆಯಲಿದೆ. ಭೋಜನ ತಯಾರಿಸಲು ಸಿದ್ಧರಿದ್ದರೆ ಅವಕಾಶ ನೀಡಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಮಿತಿ ಕೆಫೆಗೆ ಭೇಟಿನೀಡಿ ಶುಚಿತ್ವ, ಆಹಾರದ ಗುಣಮಟ್ಟ, ರುಚಿ ಪರಿಶೀಲಿಸಲಿದೆ. ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಅಗತ್ಯವಿದ್ದರೆ ಬದಲಾವಣೆಗೆ ಸಲಹೆ ಸೂಚನೆಗಳನ್ನು ನೀಡಲಿದೆ.
‘ಕೆಫೆ ನಡೆಸಲು ಸರ್ಕಾರದಿಂದ ₹5 ಲಕ್ಷದವರೆಗೂ ನೆರವು ದೊರೆಯುತ್ತದೆ. ಉಳಿದ ಬಂಡವಾಳವನ್ನು ಸ್ವಸಹಾಯ ಸಂಘಗಳು ಸ್ವಂತ ನಿಧಿಯನ್ನು ಪಡೆಯಬೇಕು. ಕೆಫೆಯಿಂದ ಬಂದ ಆದಾಯದಲ್ಲಿ ಸಾಲ ಮರುಪಾವತಿಸಿ ಉಳಿಕೆ ಲಾಭವನ್ನು ಹಂಚಿಕೊಳ್ಳಬಹುದು. ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ದೊರೆಯಬೇಕು. ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂಬುದು ಅಕ್ಕ ಕೆಫೆ ಆರಂಭದ ಹಿಂದಿರುವ ಉದ್ದೇಶ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹೇಳಿದರು.
ತೆರಕಣಾಂಬಿ ಸಂತೆಯ ಬಳಿ ಕೆಫೆ ಆರಂಭಕ್ಕೆ ಸಿದ್ಧತೆ
ಮಹಿಳೆಯರ ಉಸ್ತುವಾರಿಯಲ್ಲಿ ನಡೆಯಲಿದೆ ಹೋಟೆಲ್
ರಾಜ್ಯದಾದ್ಯಂತ ಗಮನ ಸೆಳೆಯುತ್ತಿರುವ ಅಕ್ಕ ಕೆಫೆ
ಅಕ್ಕ ಕೆಫೆ ತೆರೆಯಲು ಸೂಕ್ತ ಸ್ಥಳ ದೊರೆತರೆ ತಾಲ್ಲೂಕಿಗೊಂದು ಹೋಟೆಲ್ ತೆರೆಯಲಾಗುವುದು, ಮಹಿಳೆಯರ ಸ್ವಉದ್ಯಮ ಸ್ಥಾಪಿಸುವ ಕನಸು ನನಸು ಮಾಡಲಾಗುವುದುಮೋನಾ ರೋತ್, ಜಿ.ಪಂ. ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.