
ಮಹದೇಶ್ವರ ಬೆಟ್ಟ: ಅಮಾವಾಸ್ಯೆ ಪ್ರಯುಕ್ತ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ ನಡೆಯಿತು. ರಾಜ್ಯದ ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಮಹದೇಶ್ವರನ ದರ್ಶನ ಪಡೆದು ಪುನೀತರಾದರು.
ಅಮಾವಾಸ್ಯೆಯ ಜೊತೆಗೆ ರಜಾ ದಿನವೂ ಆಗಿದ್ದರಿಂದ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮಾದಪ್ಪನಿಗೆ ಅಮಾವಾಸ್ಯೆಯ ವಿಶೇಷ ಪೂಜೆ ಹಾಗೂ ವಿವಿಧ ಸೇವೆಗಳು ನೆರವೇರಿದವು. ವಿವಿಧ ಪುಷ್ಪಗಳಿಂದ ಸಿಂಗಾರಗೊಂಡಿದ್ದ ಮಾದೇಶ್ವರನಿಗೆ ಮುಂಜಾನೆಯ ನುಸುಕಿನಲ್ಲಿ ಮಹಾ ಮಂಗಳಾರತಿ, ಬಿಲ್ವಾರ್ಚನೆ, ಗಂಗಾಭಿಷೇಕ, ಕ್ಷೀರಾಭಿಷೇಕ ನೇರವೇರಿತು. ಬಳಿಕ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ಮಾದಪ್ಪನ ದರ್ಶನ ಪಡೆದರು.
ಮಾದಪ್ಪನ ವಿಶೇಷ ಸೇವೆ, ಮಹಾ ಮಂಗಳಾರತಿ, ದೀಪಾಲಂಕಾರ ಸೇವೆಗಳಲ್ಲಿ ಪಾಲ್ಗೊಂಡ ಭಕ್ತರು ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ, ಬೆಳ್ಳಿ ರಥೋತ್ಸವ, ಪಂಜಿನ ಸೇವೆ, ದೂಪದ ಸೇವೆ, ಉರುಳು ಸೇವೆಯನ್ನು ಭಾಗವಹಿಸಿದರು. ಹಲವರು ಮಾದಪ್ಪನಿಗೆ ಮುಡಿ ಸೇವೆ ನೀಡಿದರು.
ವಿವಿಧ ಸೇವೆ ಹಾಗೂ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಬಿಡದಿ ಸ್ಥಳಗಳಲ್ಲಿ ಬಿಡಾರಗಳನ್ನು ಹೂಡಿ ಅಡುಗೆ ಮಾಡಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಿದ್ದರು. ಅಮಾವಾಸ್ಯೆಯ ದಿನದ ದೇವರ ದರ್ಶನ ಪಡೆಯುವುದು ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವುದು ಹೆಚ್ಚು ಫಲಪ್ರಧ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಸಾರಿಗೆ ಸೌಲಭ್ಯಗಳು ಸಮರ್ಪಕವಾಗಿ ಸಿಗಲಿಲ್ಲ.
ದರ್ಶನ ಮುಗಿಸಿ ಊರುಗಳತ್ತ ತೆರಳಲು ಸರಿಯಾದ ಬಸ್‌ಗಳ ಲಭ್ಯತೆ ಇಲ್ಲದೆ ಭಕ್ತರು ಪರದಾಡುವಂತಾಯಿತು. ಪ್ರತಿ ಅಮಾವಾಸ್ಯೆಯಂದು ಮಹದೇಶ್ವರ ಬೆಟ್ಟದಲ್ಲಿ ಬಸ್‌ಗಳ ಕೊರತೆ ಎದುರಾಗುತ್ತಿದ್ದು ಊರುಗಳಿಗೆ ತೆರಳಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದೇವರ ದರ್ಶನಕ್ಕೆ ಮೂರ್ನಾಲ್ಕು ಗಂಟೆ ಕಾಯಬೇಕು, ಬಳಿಕ ಬಸ್‌ಗಳಿಗೂ ಎರಡರಿಂದ ಮೂರು ತಾಸು ಕಾಯಬೇಕು ಎಂದು ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುವುದರಿಂದ ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಬಸ್‌ಗಳನ್ನು ಓಡಿಸಬೇಕು. ಬೆರಳೆಣಿಕೆ ಬಸ್‌ಗಳು ಮಾತ್ರ ಬಿಡುವುದರಿಂದ ಭಕ್ತರು ಉಸಿರು ಗಟ್ಟಿಸುವ ವಾತಾವರಣದಲ್ಲಿ ಊರುಗಳಿಗೆ ತೆರಳಬೇಕು, ಮಹಿಳೆಯರು, ಮಕ್ಕಳು, ವೃದ್ಧರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕನಿಷ್ಠ ವಾರಾಂತ್ಯ, ಅಮಾವಾಸ್ಯೆ, ಉತ್ಸವಗಳ ಸಂದರ್ಭದಲ್ಲಾದರೂ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಚಾಮರಾಜನಗರದಿಂದ ಬಂದಿದ್ದ ಭಕ್ತರಾದ ಮಹದೇವು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.