ಚಾಮರಾಜನಗರ: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಗೌರವ ವ್ಯಕ್ತಿ. ನಮ್ಮ ದೇಶದಿಂದ ಹೊರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನವರು ನಮಗೆ ‘ಜೈ ಭೀಮ್’ ಎಂದು ನಮಸ್ಕರಿಸಿ ಸ್ವಾಗತಿಸುತ್ತಾರೆ, ಗೌರವ ನೀಡುತ್ತಾರೆ’ ಎಂದು ಚಾಮರಾಜನಗರದ ಇಂಟರ್‌ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಭಂತೇಜಿ ಬೋಧಿದತ್ತ ಬಂತೇಜಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡಿದ್ದಡಾ.ಬಿ.ಆರ್.ಅಂಬೇಡ್ಕರ್ ಅವರ128ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಹುಟ್ಟಿನಿಂದ ಸಾವಿನವರೆಗೂ ಸಂವಿಧಾನದ ಅನುಕೂಲ ಪಡೆದ ಆರ್ಥಿಕವಾಗಿ ಸದೃಢರಾಗಿ ಮೀಸಲಾತಿಯ ಮೂಲಕ ಶಿಕ್ಷಣ ಹಾಗೂ ಇನ್ನಿತರ ಅನುಕೂಲಗಳನ್ನು ಪಡೆದ ಅತಿ ಬುದ್ದಿವಂತರು ‘ಜೈ ಭೀಮ್’ ಎಂದು ಹೇಳಲು ಹಿಂಜರಿಯುತ್ತಾರೆ.ಎಲ್ಲಾದರೂ ನನ್ನ ಜಾತಿ ಗೊತ್ತಾಗಿ ಬಿಡುತ್ತದೆ. ನನಗೆ ಅವಮಾನವಾಗುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಅಂತಹ ಅವಿವೇಕಿಗಳಿಗೆ ಅಂಬೇಡ್ಕರ್ ಎಂತಹ ವ್ಯಕ್ತಿ ಎನ್ನುವ ಪರಿವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹೊರರಾಷ್ಟ್ರಗಳಲ್ಲಿ ನಾವು ಅಂಬೇಡ್ಕರ್ ದೇಶದವರು ಎಂದು ತಿಳಿದಾಗ ನಮಗೆ ಎಲ್ಲಿಲ್ಲದ ಗೌರವ ಸಿಗುತ್ತದೆ. ಆದರೆ, ನಮ್ಮ ದೇಶದಲ್ಲಿ ಮೀಸಲಾತಿಯ ಸದುಪಯೋಗ ಪಡೆದ ಕೆಲ ಅವಿವೇಕಿಗಳಿಂದ ಅಗೌರವ ಸಿಗುತ್ತಿದೆ’ ಎಂದರು.
ಇಂಗ್ಲಿಷ್‌ಪ್ರಾಧ್ಯಾಪಕ ಡಾ.ಎ.ಟಿ.ಕೃಷ್ಣಮೂರ್ತಿಮಾತನಾಡಿ, ‘ಪ್ರಪಂಚದ ವಿಶ್ವವಿದ್ಯಾಲಯಗಳಲ್ಲಿ ಭಗವಾನ್ ಬುದ್ದ, ಅಂಬೇಡ್ಕರ್ ಅವರ ವಿಚಾರಗಳಿಗೆ ಮಾತ್ರ ಹೆಚ್ಚು ಸಂಶೋಧನೆ, ಚರ್ಚೆಗಳು ನಡೆಯುತ್ತಿವೆ. ಅಂಬೇಡ್ಕರ್ ಅವರು ಸಮಾಜದ ಪರಿವರ್ತನೆಗಾಗಿ, ಶೋಷಿತ ಜನರಅಭಿವೃದ್ಧಿಗಾಗಿಶ್ರಮಿಸಿದ್ದರು. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಸಂವಿಧಾನ ರಕ್ಷಕರು, ಭಕ್ಷಕರಲ್ಲ: ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ,‘ಸಂವಿಧಾನ ಬದಲಾಯಿಸುತ್ತೇವೆ ಎನ್ನುವವವರು ಭಕ್ಷಕರು. ಅದೇ ಸಂವಿಧಾನ ರಕ್ಷಿಸುವ ನಾವು ರಕ್ಷಕರು. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿರುವ ಈ ಸಂದರ್ಭದಲ್ಲಿಶೋಷಿತರು ಜಾಗೃತರಾಗಬೇಕು’ ಎಂದು ಕರೆ ನೀಡಿದರು.
ಸಾಂಸ್ಕೃತಿಕ ಹಬ್ಬ: ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ‘ಚುನಾವಣೆಗಳು ಏಪ್ರಿಲ್ ತಿಂಗಳಲ್ಲಿ ನಡೆಯುವುದರಿಂದ ಅಂಬೇಡ್ಕರ್ ಜಯಂತಿ ಆಚರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುತ್ತದೆ. ನಮ್ಮ ರಾಷ್ಟ್ರಕ್ಕೆ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿಯ ಜನ್ಮ ದಿನವನ್ನು ಎಲ್ಲರೂಸಾಂಸ್ಕೃತಿಕ ಹಬ್ಬವಾಗಿ ಆಚರಿಸಬೇಕು.ಈ ದಿನವೇ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸಬೇಕು’ ಎಂದರು.
ಆದಿಕರ್ನಾಟಕ ಅಭಿವೃದ್ಧಿಸಂಘದ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಚಿತ್ರದುರ್ಗ ಸಿದ್ದರಾಮೇಶ್ವರ ಸ್ವಾಮೀಜಿ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಣಗಳ್ಳಿ ಬಸವರಾಜು, ದಲಿತ ಸಂಘರ್ಷ ಸಮಿತಿ ಸಂಯೋಜಕ ಕೆ.ಎಂ.ನಾಗರಾಜು, ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಮಾಡ್ರಳ್ಳಿ ಸುಭಾಷ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜಣ್ಣ, ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕಂದಹಳ್ಳಿ ನಾರಾಯಣ, ಪಂಚಶೀಲ ಫೌಂಡೇಶನ್ ಅಧ್ಯಕ್ಷ ಪಿ.ಸೋಮಣ್ಣ, ರಾಮಸಮುದ್ರ ಮಹೇಶ್, ನಾಗರಾಜು ಇದ್ದರು.
‘30 ಜಿಲ್ಲೆಗಳಿಗೂ ಪಂಚಶೀಲ ಪಾದಯಾತ್ರೆ’
ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವಉದ್ದೇಶದಿಂದಅಕ್ಟೋಬರ್‌ನಲ್ಲಿ ಪಂಚಶೀಲ ಪಾದಯಾತ್ರೆಯನ್ನು ರಾಜ್ಯದ30 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು.ಬುದ್ಧ,ಅಂಬೇಡ್ಕರ್ ಅವರ ವಿಚಾರಗಳನ್ನುಗ್ರಾಮೀಣ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ’ ಬೋಧಿದತ್ತ ಬಂತೇಜಿ ಹೇಳಿದರು.
‘ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆಮಾಡಿಪಾದಯಾತ್ರೆಗೆ ಚಾಲನೆ ಸಿಗಲಿದೆ.3 ಸಾವಿರ ಕಿ.ಮೀ ಪಾದಯಾತ್ರೆ ನಡೆಯಲಿದೆ.ರಾಜ್ಯದಎಲ್ಲಗ್ರಾಮಗಳಲ್ಲಿ ಅಂಬೇಡ್ಕರ್ ಅವರ ತತ್ವಾದರ್ಶ ಕುರಿತು ಜಾಗೃತಿಮೂಡಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.