ADVERTISEMENT

ಕೊಳ್ಳೇಗಾಲ | ಕಾಮಗಾರಿ ವೀಕ್ಷಣೆ: ಅಂಬೇಡ್ಕರ್ ಭವನ ಉದ್ಘಾಟನೆ ಶೀಘ್ರ

ಗುಣಮಟ್ಟ, ಲೋಪದೋಷ ಚರ್ಚಿಸಿದ ಶಾಸಕ, ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:01 IST
Last Updated 10 ಆಗಸ್ಟ್ 2025, 5:01 IST
ಕೊಳ್ಳೇಗಾಲ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್  ಭೇಟಿ ನೀಡಿ ವೀಕ್ಷಣೆ ಮಾಡಿದರು
ಕೊಳ್ಳೇಗಾಲ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್  ಭೇಟಿ ನೀಡಿ ವೀಕ್ಷಣೆ ಮಾಡಿದರು   

ಕೊಳ್ಳೇಗಾಲ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಶನಿವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಭವನಕ್ಕೆ ಆಗಮಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿ, ಕಾಮಗಾರಿಯ ಗುಣಮಟ್ಟ ಹಾಗೂ ಲೋಪದೋಷಗಳ ಬಗ್ಗೆ ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಕೆಲಕಾಲ ಚರ್ಚೆ ನಡೆಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈಗಾಗಲೇ ಅಂಬೇಡ್ಕರ್ ಭವನ ಸುಮಾರು 20 ವರ್ಷಗಳಿಂದಲೂ ಸಹ ಉದ್ಘಾಟನೆ ಭಾಗ್ಯ ಕಂಡಿಲ್ಲ. ಹಾಗಾಗಿ ಉಳಿದ ಕಾಮಗಾರಿಯನ್ನು ಅಧಿಕಾರಿಗಳು ಬೇಗ ಮುಗಿಸಿ ಉದ್ಘಾಟನೆಗೆ ಅನುಕೂಲ ಮಾಡಿಕೊಡಬೇಕು ಎಂದರು.

ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನ ಇದೆ. ಆದರೆ ಕಾಮಗಾರಿ ಮುಕ್ತಾಯವಾಗದೆ ಇನ್ನೂ ಕುಂಠಿತವಾಗಿದೆ. ಹಾಗಾಗಿ ಅಂಬೇಡ್ಕರ್ ಸಂಘದವರು ಹಾಗೂ ಭೀಮ ನಗರದ ಮುಖಂಡರು ವೈಯಕ್ತಿಕ ವಿಚಾರ ಪಕ್ಕಕ್ಕಿಟ್ಟು ಅಂಬೇಡ್ಕರ್ ಭವನದ ಕಾಮಗಾರಿ ಉದ್ಘಾಟನೆಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, 20 ವರ್ಷಗಳಿಂದ ಭವನದ ಕಾಮಗಾರಿ ಕುಂಠಿತವಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಉಳಿದ ಕಾಮಗಾರಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಮುಗಿಸಿ ಅನುಕೂಲ ಕಲ್ಪಿಸಿಕೊಡಬೇಕು. ಕಾಮಗಾರಿ ಗುಣಮಟ್ಟದಿಂದ ಇರಬೇಕು. ಈ ವಿಷಯದಲ್ಲಿ ರಾಜಿಯೇ ಇಲ್ಲ. ಹಾಗಾಗಿ ಅಕ್ಟೋಬರ್ 30ರೊಳಗೆ ಕಾಮಗಾರಿ ಮುಕ್ತಾಯ ಮಾಡಿ ನವೆಂಬರ್ 26ರಂದು ಭವನ ಉದ್ಘಾಟನೆ ಆಗಬೇಕು ಎಂದರು.

ಕಾಮಗಾರಿ ಜವಾಬ್ದಾರಿಯನ್ನು ನೂತನ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೋಡಿಕೊಳ್ಳುವರು. ವಾರಕ್ಕೊಮ್ಮೆ ಭವನದ ಕಾಮಗಾರಿ ವೀಕ್ಷಣೆ ಮಾಡಬೇಕು. ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಹಾಗೂ ಭೀಮ ನಗರದ ಮುಖಂಡರು ಕೆಲಸ ಕಾರ್ಯ ಮಾಡಿಸಿಕೊಂಡು ಭವನದ ಉದ್ಘಾಟನೆಗೆ ಶ್ರಮಿಸಬೇಕು. ಸಮುದಾಯದವರು ಭವನದ ಸದುಪಯೋಗ ಪಡೆದುಕೊಳ್ಳಬೇಕು. ಕೂಡಲೇ ಅಧಿಕಾರಿಗಳು ಭವನದ ಕಾಮಗಾರಿ ಮುಗಿಸಿ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ನಗರಸಭೆ ಅಧ್ಯಕ್ಷೆ ರೇಖಾ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿಂದ್ಯಾ, ತಹಶೀಲ್ದಾರ್ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ, ಇಒ ಗುರು ಶಾಂತಪ್ಪ ಬೆಳ್ಳುಂಡಗಿ, ಪೌರಾಯುಕ್ತ ರಮೇಶ್, ಎಇಇ ಚಿಕ್ಕಲಿಂಗಯ್ಯ, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ, ಮುಖಂಡ ಚಿಕ್ಕ ಮಾಳಿಗೆ, ಸಿದ್ದಪ್ಪಾಜಿ, ಮೋಹನ್ ಕುಮಾರ್, ಪಾಪಣ್ಣ, ರಾಚ್ಚಪ್ಪಾಜಿ, ರಮೇಶ್, ಕಿರಣ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.