
ಚಾಮರಾಜನಗರ: ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಪ್ರತಿಮೆ ಭಗ್ನಗೊಳಿಸಿ ಭಾವಚಿತ್ರಗಳನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಯ ಪರವಾಗಿ ಹಾಗೂ ಪೊಲೀಸರ ತನಿಖೆಯ ಮೇಲೆ ಕೆಲವು ನಾಯಕ ಸಮಾಜದ ಮುಖಂಡರು ಅನುಮಾನ ವ್ಯಕ್ತಪಡಿಸಿರುವುದು ಖಂಡನೀಯ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಅಯ್ಯನಪುರ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂಬೇಡ್ಕರ್ ಹಾಗೂ ಬುದ್ಧನಿಗೆ ಅಪಮಾನ ಮಾಡಿರುವ ಘಟನೆಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡು ಸಮುದಾಯಗಳ ಮಧ್ಯೆ ಸಂಘರ್ಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪ್ರಕರಣದಲ್ಲಿ ದಲಿತ ಸಮಾಜವನ್ನು ದೂಷಿಸಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಾದವರು ದ್ವೇಷ ಬಿತ್ತುತ್ತಿದ್ದಾರೆ’ ಎಂದು ನಾಯಕ ಸಮಾಜದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಹಾಗೂ ಬುದ್ಧನಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಸುತ್ತಿದ್ದು ಸತ್ಯ ಬಹಿರಂಗವಾಗುವವರೆಗೆ ಕಾಯಬೇಕು. ಪರಿಶಿಷ್ಟರು ಹಾಗೂ ನಾಯಕ ಸಮಾಜ ಹಿಂದಿನಿಂದಲೂ ಸಹೋದರತ್ವ ಹಾಗೂ ಸೌಹಾರ್ದಯುತವಾಗಿ ಬದುಕುತ್ತಿದ್ದು ಬಿರುಕು ಸೃಷ್ಟಿಸುವ ಪ್ರಯತ್ನ ಮಾಡಬಾರದು. ಸಮಾಜ ಒಡೆಯುವ ಚಿತಾವಣೆಗೆ ನಾಯಕ ಸಮಾಜದ ಹಿರಿಯ ಮುಖಂಡರು ಸೊಪ್ಪು ಹಾಕಬಾರದು ಎಂದರು.
ತನಿಖೆಯ ದಿಕ್ಕು ತಪ್ಪಿಸುವ ಹಾಗೂ ಪೊಲೀಸರ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸಕ್ಕೆ ಕೈಹಾಕಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳು ಯಾವ ಸಮುದಾಯಗಳಿಗೆ ಸೇರಿದ್ದರೂ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆ ನಡೆಯಲಿ. ಪ್ರಕರಣದಲ್ಲಿ ಓರ್ವನ ಬಂಧನ ಸಾಲುವುದಿಲ್ಲ; ಕೃತ್ಯಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ಈಚೆಗೆ ನಗರಕ್ಕೆ ಬಂದಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪೊಲೀಸ್ ತನಿಖೆಯನ್ನು ಅನುಮಾನಿರುವುದು ಅಂಬೇಡ್ಕರ್ ಅವರನ್ನು ವಿರೋಧಿಸಿದಂತೆ ಎಂದು ಟೀಕಿಸಿದರು
ಮುಖಂಡ ನಲ್ಲೂರು ಸೋಮೇಶ್ವರ್ ಮಾತನಾಡಿ, ಅಂಬೇಡ್ಕರ್, ಬುದ್ಧನಿಗೆ ಅಪಮಾನ ಪ್ರಕರಣದಲ್ಲಿ ಸಮುದಾಯಗಳನ್ನು ಎಳೆದು ತರಬಾರದು. ಕೃತ್ಯ ಯಾರೇ ಎಸಗಿದ್ದರೂ ಕಠಿಣ ಶಿಕ್ಷೆಯಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೋವಿಂದರಾಜು, ಸೋಮಣ್ಣ, ಶಿವಣ್ಣ, ರಂಗಸ್ವಾಮಿ, ಮಹದೇವಸ್ವಾಮಿ, ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.