
ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿದ ಪ್ರಕರಣ ನಡೆದಿರುವ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಮಂಗಳವಾರ ಭೇಟಿನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಇದೇವೇಳೆ ಮಾತನಾಡಿ, ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯದ ಸಂದೇಶ ನೀಡಿದ ಮಹನೀಯರ ವಿಗ್ರಹಗಳನ್ನು ಭಗ್ನಗೊಳಿಸುವಂತಹ ಕೃತ್ಯಗಳು ಮರುಕಳಿಸಬಾರದು. ಸೌಹಾರ್ದತೆ ಕಾಪಾಡುವುದು ಮೊದಲ ಆದ್ಯತೆಯಾಗಬೇಕು. ಜ್ಯೋತಿಗೌಡನಪುರದಲ್ಲಿ ನಡೆದ ಕೃತ್ಯದ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮಾಹಿತಿ ಪಡೆಯಲಾಗಿದೆ ಎಂದರು.
ಪರಿಶಿಷ್ಟ ಜಾತಿ ವರ್ಗಗಳ ಆಯೋಗದಲ್ಲಿ 2,573 ಪ್ರಕರಣಗಳು ದಾಖಲಾಗಿದ್ದು, ಅಧಿಕಾರ ಸ್ವೀಕರಿಸಿದ ನಂತರದ ಒಂದು ತಿಂಗಳಲ್ಲಿ 125 ಪ್ರಕರಣಗಳನ್ನು ಕೈಗೆತ್ತಿಕೊಂಡು 25 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಮೀನುಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗಿವೆ. ಜನರಿಗೆ ಸರ್ಕಾರದ ಪ್ರಮಾಣ ಪತ್ರಗಳ ವಿತರಣೆ, ಸೇವೆಗಳನ್ನು ತಲುಪಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಎಲ್.ಮೂರ್ತಿ ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಎಸ್‌ಪಿ ಬಿ.ಟಿ.ಕವಿತಾ ಮಾತನಾಡಿದರು. ಆಯೋಗದ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಮು, ತಹಶೀಲ್ದಾರ್ ಗಿರಿಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಮುಖಂಡರಾದ ವೆಂಕಟರಮಣ ಪಾಪು, ಶಿವಕುಮಾರ್, ಆರ್.ಮಹದೇವು, ನರೇಂದ್ರ, ಇನ್ನಿತರ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.