
ಬಂಧನ (ಸಾಂದರ್ಭಿಕ ಚಿತ್ರ)
ಚಾಮರಾಜನಗರ: ತಾಲ್ಲೂಕಿನ ಜ್ಯೋತಿ ಗೌಡನಪುರ ಗ್ರಾಮದಲ್ಲಿ ಈಚೆಗೆ ಅಂಬೇಡ್ಕರ್ ಹಾಗೂ ಬುದ್ಧನ ಮೂರ್ತಿಗಳನ್ನು ಧ್ವಂಸಗೊಳಿಸಿ, ಅಂಬೇಡ್ಕರ್ ಭಾವಚಿತ್ರ ಹಾಗೂ ಫ್ಲೆಕ್ಸ್‌ಗಳನ್ನು ವಿರೂಪಗೊಳಿಸಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿ ಮಂಜುನಾಥನನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಜ್ಯೋತಿಗೌಡನಪುರ ಗ್ರಾಮದ ಜೆ.ಸಿ.ರಾಘವೇಂದ್ರ ನೀಡಿದ ದೂರಿನಂತೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಕಲಂ 298, 196 1 ಎ, 1 ಬಿ, 299 ಹಾಗೂ ಸಾರ್ವಜನಿಕ ಆಸ್ತಿ ಹಾನಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿ ಪತ್ತೆಗೆ 7 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.
‘ಗ್ರಾಮದ ಸುತ್ತ 86 ಸಿಸಿಟಿವಿ ಕ್ಯಾಮೆರಾ ಹಾಗೂ 1,877 ಮೊಬೈಲ್ ಕರೆಗಳ ಮಾಹಿತಿ, 24 ಸ್ಥಳಗಳ ಟವರ್ ಮಾಹಿತಿ ಪರಿಶೀಲಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
‘ಆರೋಪಿ ಮಂಜುನಾಥ್ ವಿರುದ್ಧ ಹಿಂದೆ ಚಾಮರಾಜನಗರ ಪೂರ್ವ ಹಾಗೂ ಪಟ್ಟಣ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿದ್ದವು. ಅಪರಾಧ ಹಿನ್ನೆಲೆ ಹೊಂದಿದ್ದ ಮಂಜುನಾಥ್ ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನಿಯಾಗಿರುವುದು ತಿಳಿದು ಬಂದಿದೆ’ ಎಂದು ಎಸ್‌ಪಿ ವಿವರ ನೀಡಿದರು.
‘ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗೆ ಕೃತ್ಯ ಎಸಗಲು ಸಹಕಾರ ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.
ಆರೋಪಿಯ ಪತ್ತೆ ಕಾರ್ಯಾಚರಣೆ ಎಎಸ್‌ಪಿ ಶಶಿಧರ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಡಿವೈಎಸ್‌ಪಿ ಸ್ನೇಹಾರಾಜ್, ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದಿದ್ದು, ಇನ್‌ಸ್ಪೆಕ್ಟರ್‌ಗಳಾದ ಆರ್.ಶ್ರೀಕಾಂತ್, ಸಿ.ಪಿ.ನವೀನ್, ಚಿಕ್ಕರಾಜಶೆಟ್ಟಿ, ಎಸ್.ಎಲ್.ಸಾಗರ್, ಸಿ.ಆನಂದಮೂರ್ತಿ, ಪಿಎಸ್ಐಗಳಾದ ತಾಜುದ್ದೀನ್, ಮಂಜುನಾಥ್, ಆರ್.ವೆಂಕಟೇಶ್, ಮಹೇಶ್ ಹಾಗೂ ಅಪರಾಧ, ತಾಂತ್ರಿಕ ವಿಭಾಗದ ಸಿಬ್ಬಂದಿ, ಸೊಕೊ, ಶ್ವಾನದಳ, ಬೆರಳಚ್ಚು ತಂಡದ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.