ADVERTISEMENT

ಬಂಡೀಪುರ: ಸತತ ಮಳೆಯಿಂದ ತಂಪಾದ ವಾತಾವರಣ, ದರ್ಶನ ಕೊಡುತ್ತಿವೆ ಪ್ರಾಣಿಗಳು

ಪ್ರವಾಸಿಗರ ಮೊಗದಲ್ಲಿ ಖು‌ಷಿ

ಮಲ್ಲೇಶ ಎಂ.
Published 29 ಏಪ್ರಿಲ್ 2019, 19:46 IST
Last Updated 29 ಏಪ್ರಿಲ್ 2019, 19:46 IST
ದಿಟ್ಟಿಸಿ ನೋಡುತ್ತಿರುವ ವ್ಯಾಘ್ರ  ಚಿತ್ರ: ನಟರಾಜು
ದಿಟ್ಟಿಸಿ ನೋಡುತ್ತಿರುವ ವ್ಯಾಘ್ರ  ಚಿತ್ರ: ನಟರಾಜು   

ಗುಂಡ್ಲುಪೇಟೆ: ಬಿಸಿಲಿನ ತಾಪಕ್ಕೆ ಝಳಕ್ಕೆ ಒಣಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ಇತ್ತೀಚಿಗೆ ಸುರಿದ ಮಳೆ ಹಸಿರು ಚಿಗುರಿಸಿದ್ದು ಮಾತ್ರವಲ್ಲದೇ, ಪ್ರವಾಸಿಗರಿಗೆ ಪ್ರಾಣಿಗಳ ದರ್ಶನ ಸಿಗುವಂತೆಯೂ ಮಾಡಿದೆ.

ಬೇಸಿಗೆ ಆರಂಭವಾದಗಿನಿಂದ ರಸ್ತೆಯ ಬದಿ ಮತ್ತು ಸಫಾರಿ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರದ ಪ್ರಾಣಿಗಳು, ಮಳೆ ಬಂದು ವಾತಾವರಣ ತಂಪಾಗುತ್ತಿದ್ದಂತೆಯೇ ಕಾಣಿಸಿಕೊಳ್ಳುವುದಕ್ಕೆ ಆರಂಭಿಸಿದೆ.

ಸಫಾರಿ ವಲಯದಲ್ಲಿ ಹೆಚ್ಚು ಕೆರೆಗಳಿವೆ. ಹಾಗಿದ್ದರೂ ಕೆಲವು ತಿಂಗಳುಗಳಿಂದ ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತಿರಲಿಲ್ಲ. ಎರಡು ಮೂರು ವಾರಗಳಿಂದ ಸತತವಾಗಿ ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಸಫಾರಿ ವಲಯದಲ್ಲಿ ವನ್ಯಜೀವಿಗಳು ಕಂಡುಬರುತ್ತಿವೆ. ಆನೆಗಳ ಹಿಂಡು, ಕಾಡಮ್ಮೆ, ಜಿಂಕೆ, ಕರಡಿ, ಚಿರತೆ ಹಾಗೂ ಕೆಲವೊಮ್ಮೆ ಹುಲಿ ಸಹ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಖುಷಿ ಹೆಚ್ಚಿಸಿದೆ.

ADVERTISEMENT

ಅನೇಕ ಪ್ರವಾಸಿಗರು ಸಫಾರಿಗೆ ಹೋಗಿ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ಯಾಮರಾಗಳಲ್ಲೂ ಅವುಗಳನ್ನು ಸೆರೆ ಹಿಡಿದಿದ್ದಾರೆ. ಸಫಾರಿ ವಲಯಗಳಾದ ತಾವರಕಟ್ಟೆ ಕೆರೆ, ಟೈಗರ್ ರೋಡ್, ವೆಸ್ಲಿ ರೋಡ್, ಮೂಲಾಪುರ, ಕಡಬನಕಟ್ಟೆ, ಹೊಳ್ಕಲ್ ಕೆರೆ ರಸ್ತೆ, ಬಸವನಕಟ್ಟೆ, ಅರಳಿ ಕಟ್ಟೆ ಮತ್ತು ಮರಳಲ್ಲ ಭಾಗಗಳಲ್ಲಿ ಕೆರೆ ಕಟ್ಟೆಗಳಿದ್ದು ಈ ಪ್ರದೇಶದಲ್ಲಿ ವನ್ಯಜೀವಿಗಳು ಹೆಚ್ಚು ಸುಳಿದಾಡುತ್ತಿವೆ.

ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹುಲಿ, ಕೆರೆಯ ನೀರಿನಲ್ಲಿ ಆಟವಾಡುತ್ತಿರುವ ಇತರ ಪ್ರಾಣಿಗಳು ಕೂಡ ಪ್ರವಾಸಿಗರಿಗೆ ಕಂಡಿವೆ.ಬಂಡೀಪುರ– ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು ಸದಾ ಕಾಣಸಿಗುತ್ತಿದೆ.

ಚಿರತೆಯೊಂದ ಜಿಂಕೆಯನ್ನು ಬೇಟೆಯಾಡಿ ಎಳೆದು ಹೋಗುತ್ತಿರುವ ದೃಶ್ಯವನ್ನು ಭಾನುವಾರ ಪ್ರವಾಸಿಗರು ಮತ್ತು ದಾರಿಹೋಕರು ನೋಡಿದ್ದರು. ಬಂಡೀಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ನ ಪರಿಸರ ತಜ್ಞ ನಟರಾಜು ಅವರು ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯುವ ಸಮಯದಲ್ಲಿ ಅನೇಕ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

‘ಬೆಂಕಿ ಬಿದ್ದ ಸಮಯದಲ್ಲಿ ಪ್ರಾಣಿಗಳು ಕಣ್ಣಿಗೆ ಬೀಳುತ್ತಿರಲಿಲ್ಲ, ಈಗ ಮಳೆಯಾಗಿ ಮೇವು ಚಿಗುರುತ್ತಿರುವುದರಿಂದ ಪ್ರಾಣಿಗಳು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ನಟರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಸಿಗರಿಗೆ ತಿಳಿ ಹೇಳಲಾಗುತ್ತಿದೆ’

‘ಬೇಸಿಗೆ ರಜೆ ಇರುವುದರಿದ ಬಂಡೀಪುರಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಹಾಗಾಗಿ ಹೆಚ್ಚು ಪ್ರಾಣಿಗಳು ಕಾಣಸಿಗುತ್ತಿವೆ. ರಸ್ತೆಯ ಬದಿಯಲ್ಲಿ ಪ್ರಾಣಿಗಳು ಕಂಡರೆ ಸೆಲ್ಫಿ ತೆಗೆದುಕೊಳ್ಳುವುದು, ಪ್ರಾಣಿಗಳಿಗೆ ಗಾಬರಿ ಮಾಡುವ ಚಟುವಟಿಕೆಗಳನ್ನು ಮಾಡಬಾರದು ಎಂದು ಪ್ರವಾಸಿಗರಿಗೆ ಮನವರಿಕೆ ಮಾಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿರವಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.