ADVERTISEMENT

ಯಳಂದೂರು | ಕೂಳೆ ಅಡಿಕೆಗೆ ಬೇಡಿಕೆ: ಧಾರಣೆ ಚೇತರಿಕೆ

ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ; ಎರಡನೇ ಕೊಯ್ಲು ಆರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:55 IST
Last Updated 11 ನವೆಂಬರ್ 2025, 1:55 IST
ಯಳಂದೂರು ಸಮೀಪದ ಗೂಳಿಪುರ ಹೊರವಲಯದ ತೋಟದಲ್ಲಿ ಅಡಿಕೆ ಕಟಾವಿನಲ್ಲಿ ತೊಡಗಿರುವ ಶ್ರಮಿಕರು
ಯಳಂದೂರು ಸಮೀಪದ ಗೂಳಿಪುರ ಹೊರವಲಯದ ತೋಟದಲ್ಲಿ ಅಡಿಕೆ ಕಟಾವಿನಲ್ಲಿ ತೊಡಗಿರುವ ಶ್ರಮಿಕರು   

ಯಳಂದೂರು: ಹಿಂಗಾರು ಹಂಗಾಮು ಮುಗಿಯುತ್ತಿದ್ದಂತೆ ಕೂಳೆ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಎರಡನೇ ಕೊಯ್ಲು ಆರಂಭವಾಗಿದ್ದು, ಬೆಲೆ ಏರಿಕೆ ರೈತರಿಗೆ ಸಂತಸ ತಂದಿದೆ.

ಅಡಿಕೆ ಬೆಳೆಗಾರರು ತರಾತುರಿಯಲ್ಲಿ ಅಡಿಗೆ ಕಟಾವು ಮಾಡಿ ಮಾರಾಟ ಮಾಡುವತ್ತ ಚಿತ್ತ ಹರಿಸಿದ್ದಾರೆ.

ತಾಲ್ಲೂಕಿನ ಕೃಷಿಕರು ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತೀರ್ಥಹಳ್ಳಿ ಮೂಲದ ತಳಿಗಳ ಜೊತೆ ಸ್ಥಳೀಯ ಅಡಿಕೆ ‌ಸಸಿಗಳನ್ನು ನಾಟಿ ಮಾಡಿದ್ದು, ಈಚೆಗೆ ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಹದ ಮಳೆ ಹಾಗೂ ಶೀತದ ವಾತಾವರಣ ಹೆಚ್ಚಾಗಿರುವುದು ಅಡಿಕೆ ಬೆಳೆಗೆ ಪೂರಕವಾಗಿದೆ. ರೋಗದ ಹಾವಳಿಯೂ ಕಡಿಮೆಯಾಗಿದ್ದು, ಅಡಿಕೆ ಇಳುವರಿ ಹೆಚ್ಚಾಗಲು ಕಾರಣವಾಗಿದೆ.

ADVERTISEMENT

‘ಈ ವರ್ಷ ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿದೆ. ಆಗಸ್ಟ್‌ನಲ್ಲಿ ಕೊಯ್ಲು ಮಾಡಲಾಗಿದ್ದು 1 ಕೆ.ಜಿಗೆ 65ಕ್ಕೆ ಖರೀದಿ ಮಾಡಲಾಗುತ್ತಿದೆ. ನವೆಂಬರ್‌ 2ನೇ ವಾರದಿಂದ ಕೊಯ್ಲು ಜೋರಾಗಿದ್ದು, ಕೆಜಿಯೊಂದಕ್ಕೆ ಸರಾಸರಿ ₹60 ದರ ಇದೆ. ‌4 ತಿಂಗಳಿಂದ ಅಡಿಕೆಗೆ ಬೆಲೆ ಸ್ಥಿರವಾಗಿದೆ. ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದರೂ, ತೋಟದ ಮಾಲೀಕರಿಗೆ ಉತ್ತಮ ಬೆಲೆ ನೀಡಿ ಕಟಾವು ಮಾಡಲಾಗುತ್ತಿದೆ’ ಎಂದು ಅಡಿಕೆ ವ್ಯಾಪಾರಿ ಮಲ್ಲುಪುರ ಶಿವಣ್ಣ ಹೇಳಿದರು.

‘ವರ್ಷದಲ್ಲಿ ಮೂರು ಬಾರಿ ಅಡಿಕೆ ಗುಣಮಟ್ಟದ ಆಧಾರದಲ್ಲಿ ಕೊಯ್ಲು ಮಾಡಲಾಗುತ್ತದೆ. 2 ವರ್ಷಗಳಿಂದ ರೈತರ ನಿರೀಕ್ಷೆಗೆ ತಕ್ಕಂತೆ ಬೆಲೆ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ದರ ಏರಿಕೆಯಾಗಿದ್ದು ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. 4 ಎಕರೆ ತೆಂಗು ಹಾಗೂ ಅಡಿಕೆ ತೋಟದಲ್ಲಿ 15 ಕ್ವಿಂಟಾಲ್ ಅಡಿಕೆ ಕಟಾವು ಮಾಡಲಾಗಿದೆ. ವರ್ಷದ ಕೊನೆಗೆ ಮೂರನೆ ಹಂತದ ಫಸಲು ತೆಗೆಯುವ ನಿರೀಕ್ಷೆಯಲ್ಲಿ ಇದ್ದೇವೆ’ ಎನ್ನುವರು ಪಟ್ಟಣದ ಸುರೇಶ್ ಕುಮಾರ್.

ನುಸಿ ಪೀಡಿ, ಕೊಳೆ ರೋಗ ತಡೆಯಿರಿ: ‘ಅಡಿಕೆ ತಾಕು ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿದೆ. ಅಕ್ಟೋಬರ್- ನವೆಂಬರ್ ವೇಳೆ ಅಡಿಕೆಗೆ ಮೇಲು ಗೊಬ್ಬರ ಕೊಡಬೇಕು. ಹಟ್ಟಿಗೊಬ್ಬರ, ಕೋಳಿಗೊಬ್ಬರ ಹಾಗೂ ಜೀವಾಮೃತಗಳನ್ನು ಸಸಿಗಳಿಗೆ ನೀಡುವುದರಿಂದ ಇಳುವರಿ ಹೆಚ್ಚಾಗುತ್ತದೆ. ಹಿಂಗಾರು ಮುಗಿದ ನಂತರದ ದಿನಗಳಲ್ಲಿ ಅಡಿಕೆ ಮರಗಳಿಗೆ ಸುಣ್ಣದ ತಿಳಿನೀರಿನ ಸಿಂಚನ ಮಾಡಬೇಕು. ಇದರಿಂದ ಗಿಡಗಳಿಗೆ ಕೊಳೆ ರೋಗ ಕಾಡುವುದಿಲ್ಲ’ ಎನ್ನುವರು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು.

ಜಿಲ್ಲೆಯಲ್ಲಿ 2,000 ಎಕರೆಗೂ ಹೆಚ್ಚು ಅಡಿಕೆ ಕೃಷಿ | ರೈತರಿಗೆ ಲಾಭ ತಂದುಕೊಡುತ್ತಿರುವ ಅಡಿಕೆ |ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಬೆಳೆಯಲು ಉತ್ಸಾಹ 
ಅಡಿಕೆ ಬೆಳೆಗೆ ಹೆಚ್ಚಾಗಿ ತಗುಲುವ ನುಸಿ ಪೀಡೆ ರೋಗವನ್ನು ರೈತರು ನಿರ್ಲಕ್ಷ್ಯ ಮಾಡಬಾರದು ರೋಗ ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಫಸಲು ಕುಸಿಯುತ್ತದೆ ಗುಣಮಟ್ಟವೂ ಇಳಿಕೆಯಾಗಲಿದೆ
ಜಿ.ಎಸ್.ರಾಜು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.