ಹನೂರು: ರಾಜ್ಯದ ಗಡಿಭಾಗದಲ್ಲಿರುವ ಜಿಲ್ಲೆಯ ಈ ಗ್ರಾಮದ ಹೆಸರು ಮಾರ್ಟಳ್ಳಿ. ಎರಡೂವರೆ ದಶಕಗಳ ಕಾಲ ಮೂರು ರಾಜ್ಯಗಳಿಗೆ ತಲೆನೋವಾಗಿದ್ದ ಕಾಡುಗಳ್ಳ ವೀರಪ್ಪನ್, ಸಹಚರು ಆವರಿಸಿದ್ದ ಮಾರ್ಟಳ್ಳಿ ಗ್ರಾಮದಲ್ಲಿ ಈಗ ಬದಲಾವಣೆಯ ಗಾಳಿ ಬೀಸಿದೆ. ಈಗ ಅಭಿವೃದ್ಧಿಯತ್ತ ಹೆಜ್ಜೆ ಇರಿಸಿದೆ.
ತಮಿಳರು ಹಾಗೂ ಕನ್ನಡಿಗರು ನೆಲೆಸಿರುವ ಮಾರ್ಟಳ್ಳಿ ಸಿಪಾಯಿಗಳ ಕೇಂದ್ರವಾಗಿ ದೇಶದ ಗಮನ ಸೆಳೆದಿವೆ. ಕನಿಷ್ಠ ಸೌಕರ್ಯಗಳೂ ಇಲ್ಲದಿದ್ದ ಗ್ರಾಮದ ಚಹರೆ ಈಗ ಒಂದೂವರೆ ದಶಕದ ಅವಧಿಯಲ್ಲಿ ಬದಲಾಗಿದೆ.
ಜಿಲ್ಲೆಯಲ್ಲೇ ಹೆಚ್ಚು ವಿಸ್ತಾರ ಹೊಂದಿರುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯ ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 24 ಸಾವಿರ ಜನರು ವಾಸವಿದ್ದಾರೆ. ಬಹುತೇಕ ಕ್ರಿಶ್ಚಿಯನ್ನರೇ ವಾಸವಾಗಿರುವ ಈ ಪ್ರದೇಶದಲ್ಲಿ ಓದಿ ಬೆಳೆದವರು ದೇಶ–ವಿದೇಶಗಳಲ್ಲಿ ನೆಲೆಸಿದ್ದಾರೆ. ವೈದ್ಯರು, ಪಾದ್ರಿಗಳು, ದಾದಿಯರು, ಶಿಕ್ಷಕರು ಹಾಗೂ ಸೈನಿಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಮಾರ್ಟಳ್ಳಿ ಹೊಸ ವರ್ಚಸ್ಸು ಪಡೆದುಕೊಳ್ಳುತ್ತಿದೆ.
ಮುಳುಗಡೆಯ ಪ್ರಹರ: ಪ್ರಾರಂಭದಲ್ಲಿ ಹಳೇ ಮಾರ್ಟಳ್ಳಿ, ಸುಳ್ಳಾಡಿ ಹಾಗೂ ಕಡುಬೂರು ಎಂಬ ಮೂರು ಗ್ರಾಮಗಳು ಮಾತ್ರ ಇದ್ದವು. ಐದು ದಶಕಗಳಲ್ಲಿ ಈ ಭಾಗದಲ್ಲಿ 22 ಗ್ರಾಮಗಳು ತಲೆ ಎತ್ತಿವೆ. 1934ರಲ್ಲಿ ಮೆಟ್ಟೂರು ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ ನಾಯಂಬಾಡಿ, ಸಾಂಬಳ್ಳಿ, ತತ್ವವಾಡಿ, ಕೋಟ್ಟೆಯೂರು, ಮಲ್ಲಾಡಿ ತನ್ನಂತೆ ಸೇರಿದಂತೆ 12 ಹಳ್ಳಿಗಳು ಮುಳುಗಡೆಯಾಗಿದ್ದವು. ಮುಳುಗಡೆ ಗ್ರಾಮಗಳ ನಿವಾಸಿಗಳು 1925ರಿಂದ 1940ರ ಆಸುಪಾಸಿನಲ್ಲಿ ನೆಲೆ ಹುಡುಕಿಕೊಂಡು ಹಳೇ ಮಾರ್ಟಳ್ಳಿ ಭಾಗಕ್ಕೆ ಬಂದು ನೆಲೆಸಿದರು.
ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಚೆನ್ನೈ ಮಹಾಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಬಳಿಕ ಪಾಲಾರ್ ನದಿಯನ್ನು ಗುರುತಾಗಿಟ್ಟುಕೊಂಡು ಗಡಿಯನ್ನು ವಿಂಗಡಣೆ ಮಾಡಲಾಯಿತು. ಕೊಳ್ಳೇಗಾಲ-ಹನೂರು ತಾಲ್ಲೂಕಿನ ಬಹುತೇಕ ಸರ್ಕಾರಿ (1956 ವರೆಗಿನ) ಸುತ್ತೋಲೆಗಳು, ಕೋರ್ಟ್ ಕಲಾಪಗಳ ತೀರ್ಪುಗಳು, ದಾಖಲೆಗಳು ತಮಿಳು ಭಾಷೆಯಲ್ಲಿ ಇರುವುದನ್ನು ಕಾಣಬಹುದು.
ಸುಳ್ವಾಡಿಯಲ್ಲಿ ಬ್ರಹ್ಮೇಶ್ವರ ದೇವಸ್ಥಾನವಿದೆ. ಇಲ್ಲಿ ಒಂದು ಶಾಸನವಿದ್ದು ತಮ್ಮಡಿ ಮಾರಯ್ಯನ ಮಗ ಆಚಯ್ಯ ಎಂಬಾತ ಬ್ರಹ್ಮೇಶ್ವರ ದೇವಸ್ಥಾನ ಕಟ್ಟಿಸಿ ಅದನ್ನು ಮೊರಟಹಳ ನಾಯಕರಿಗೆ ಅರ್ಪಿಸಿದ್ದಾನೆಂಬುದು ಈ ಶಾಸನದ ಸಾರ. 16ನೇ ಶತಮಾನದ ಹೊತ್ತಿಗೆ ಮಾರ್ಟಳ್ಳಿ ಪಾಳೆಯಗಾರನ ಆಡಳಿತಕ್ಕೆ ಒಳಪಟ್ಟಿತ್ತು. ಆಗಿನ ಮೊರಟಹಳ್ಳಿ ಈಗಿನ ಮಾರ್ಟಳ್ಳಿಯಾಗಿದೆ ಎಂಬುದು ಹಿರಿಯರ ಮಾತು.
ಸೈನಿಕರ ತವರು
ದೇಶದ ಗಡಿ ಕಾಯಲು ಸೇನೆಗೆ ಹೆಚ್ಚು ಸೈನಿಕರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಮಾರ್ಟಳ್ಳಿ ಗ್ರಾಮಕ್ಕಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದ ಹಲವರು ಈಗ ನಿವೃತ್ತರಾಗಿದ್ದಾರೆ. ಗ್ರಾಮದ ಒಬ್ಬ ಸೈನಿಕ ಸೇವೆಯಲ್ಲಿದ್ದಾಗಲೇ ವೀರ ಮರಣವನ್ನಪ್ಪಿದ್ದರೆ ಮತ್ತೊಬ್ಬ ಸೈನಿಕ 'ಶೌರ್ಯ ಚಕ್ರ' ಪ್ರಶಸ್ತಿ ಪಡೆಯುವ ಮೂಲಕ ಗ್ರಾಮದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಿಪಾಯಿ ಶಾಲೆ
ನಿವೃತ್ತ ಯೋಧರು ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಆರ್ಮಿ ಅಸೋಸಿಯೇಷನ್’ ಎಂಬ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಮೂಲಕ ಸುಳ್ಳಾಡಿ ಗ್ರಾಮದಲ್ಲಿ ಸೈನಿಕ ತರಬೇತಿ ಶಾಲೆಯನ್ನು ಆರಂಭಿಸಿ ಸೈನ್ಯಕ್ಕೆ ಸೇರಲು ಆಸಕ್ತಿಯಿರುವ ಯುವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಯುವಕರು ಸೇನೆಗೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.