ADVERTISEMENT

‘ಅವ್ವ’, ‘ಉಮ್ಮಳ’ ಕೃತಿಗಳ ಲೋಕಾರ್ಪಣೆ

ಸೋಮಶೇಖರ ಬಿಸಲ್ವಾಡಿ ಅವರ ಪ್ರಯತ್ನಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:22 IST
Last Updated 17 ಜನವರಿ 2021, 15:22 IST
ಬಂಜಗೆರೆ ಜಯಪ್ರಕಾಶ್‌ ಹಾಗೂ ಇತರ ಗಣ್ಯರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು
ಬಂಜಗೆರೆ ಜಯಪ್ರಕಾಶ್‌ ಹಾಗೂ ಇತರ ಗಣ್ಯರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು   

ಚಾಮರಾಜನಗರ: ‘ಕವಿಗಳು ಅಥವಾ ಲೇಖಕರು ಬರೆದ ಕೃತಿಗಳು ಜನರಿಗೆ ತಲುಪಿದಾಗ ಮಾತ್ರ ಅವರು ಬರೆದದ್ದು ಸಾರ್ಥಕವಾಗುತ್ತದೆ’ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್‌ ಅವರು ಭಾನುವಾರ ತಿಳಿಸಿದರು.

ಸಾಹಿತಿ ಸೋಮಶೇಖರ ಬಿಸಲ್ವಾಡಿ ಅವರ ‘ಅವ್ವ’ ಕವನ ಸಂಕಲನ ಹಾಗೂ ಮರು ಮುದ್ರಿತ ಕಥಾಸಂಕಲನ ‘ಉಮ್ಮಳ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಕವಿಗಳು ಇಲ್ಲಿಯವರೆಗೆ ನೊಂದವರ ಪರವಾಗಿರುವ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಕವನ ಬರೆದಿದ್ದಾರೆ. ಸಮಾಜಕ್ಕೆ ಹೊಸ ದಿಕ್ಕು ತೋರಿಸುವಂತಹ ಸಾಹಿತ್ಯ ಇಂದಿನ ದಿನಗಳ ಅಗತ್ಯ’ ಎಂದು ಹೇಳಿದರು.

ಸೋಮಶೇಖರ ಬಿಸಸ್ವಾಡಿ ಅವರು ಸ್ಪಂದನಶೀಲ ಲೇಖಕರಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ADVERTISEMENT

‘ಅವ್ವ’ ಕವನ ಸಂಕಲನ ಕೃತಿ ಕುರಿತು ಮಾತನಾಡಿದತೆಂಡೆಕೆರೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಬಿ.ಮಹೇಶ್ ಹರವೆ ಅವರು, ‘ಈ ಸಂಕಲನದಲ್ಲಿ ಬ್ರಹ್ಮಾಂಡವೇ ಅಡಗಿದೆ. ಈ ಕಥಾ ಸಂಕಲನದಲ್ಲಿ ಸಾಂಸ್ಕೃತಿಕವಾದ ಬೃಹತ್ ಭಾರತವೇ ಅಡಗಿದೆ ಮತ್ತು ಸಾಂಸ್ಕೃತಿ ಚಿಂತನೆ ಇದೆ’ ಎಂದು ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರುಬನಕಟ್ಟೆ ದೇಸಿ ಸಂಸ್ಕೃತಿ ಆಧ್ಯಯನ ಕೇಂದ್ರದ ಡಾ.ವೆಂಕಟೇಶ್ ಇಂದ್ವಾಡಿ ಅವರು ಮಾತನಾಡಿ, ‘ಅಮ್ಮನನ್ನು ಕುರಿತು ಬರೆದಿರುವಂತಹ ಕವಿಗಳ ಸಂಖ್ಯೆ ದೊಡ್ಡದಿದೆ. ಇದಕ್ಕೊಂದು ಪರಂಪರೆಯೇ ಇದೆ. ಜಿಲ್ಲೆಯಲ್ಲಿ ಸೃಜನಶೀಲ ಸಾಹಿತ್ಯ ಬರುತ್ತಿದೆ. ಹೊಸ ತಲೆಮಾರಿನವರು ಸಾಹಿತ್ಯ ಬರೆಯಲು ಶುರು ಮಾಡಿದ್ದಾರೆ. ಅತ್ಯುತ್ತಮ ಕೃತಿಗಳನ್ನು ಬರೆಯುತ್ತಿದ್ದಾರೆ. ಹೊಸ ತಲೆಮಾರಿನವರಾಗಲಿ, ಹಳೆ ತಲೆಮಾರಿನವರಾಗಲಿ ಇದನ್ನು ಸವಾಲಾಗಿ ಸ್ವೀಕರಿಸಬೇಕು. ಅಗ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ’ ಎಂದರು.

ಪ್ರೊ. ಮಲೆಯೂರು ಗುರುಸ್ವಾಮಿ ಅವರು ಮಾತನಾಡಿ, ‘ಅಧ್ಯಯನ ಮತ್ತು ಚಿಂತನೆ ನಿಮ್ಮ ಬದುಕನ್ನು ಗುಣಾತ್ಮಕವಾಗಿ ಮೇಲೆ ಎತ್ತುತ್ತದೆ. ಜಿಲ್ಲೆಯಲ್ಲಿ ಬಹಳಷ್ಟು ದೊಡ್ಡ ಬರಹಗಾರರಿದ್ದಾರೆ. ಅವರ ಸಂಖ್ಯೆ ಇನ್ನು ಹೆಚ್ಚಾಗಬೇಕು’ ಎಂದು ತಿಳಿಸಿದರು.

ಕೃತಿಗಳ ಕರ್ತೃ ಸೊಮಶೇಖರ ಬಿಸಲ್ವಾಡಿ, ಅಲೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಮಂಜು ಕೋಡಿಉಗನೆ, ಮೈಸೂರಿನ ಕೀರ್ತನ ಗ್ರಾಫಿಕ್ಸ್‌ನ ಬಸವರಾಜು, ನೆಲೆ ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.