ಚಾಮರಾಜನಗರ: ಉತ್ತಮ ಆಹಾರ ಪದ್ಧತಿ, ದುಶ್ಚಟಮುಕ್ತ ಜೀವನ, ಯೋಗ, ಧ್ಯಾನ ಮಾಡುವ ಮೂಲಕ ಒತ್ತಡ ರಹಿತ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಎಸ್.ಬಿ.ಐ ಬ್ಯಾಂಕ್ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ‘ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ’ ಘೋಷವಾಕ್ಯದಡಿ ಆಯೋಜಿಸಲಾಗಿದ್ದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದರು.
‘ಆರೋಗ್ಯ ಕ್ಷೇತ್ರದಲ್ಲಿ ಜಗತ್ತು ಎಷ್ಟೆ ಮುಂದುವರಿದಿದ್ದರೂ ಬಹಳಷ್ಟು ಔಷಧಗಳನ್ನು ಕಂಡುಹಿಡಿದಿದ್ದರೂ ಎಲ್ಲಕ್ಕೂ ಮೂಲ ಆಯುರ್ವೇದ ಗುಣವುಳ್ಳ ಗಿಡಮೂಲಿಕೆಗಳಾಗಿವೆ. ಆಯುರ್ವೇದ ಔಷಧಗಳಿಂದ ಕಾಯಿಲೆ ಶೀಘ್ರ ಗುಣಮುಖವಾಗದಿದ್ದರೂ ಚಿಕಿತ್ಸಾ ಪದ್ಧತಿಯಲ್ಲಿ ಅಡ್ಡ ಪರಿಣಾಮಗಳು ಇರುವುದಿಲ್ಲ. ಬದಲಾದ ತಂತ್ರಜ್ಞಾನ ಯುಗದಲ್ಲಿ ಕಾಯಿಲೆಗಳು ಅತಿಶೀಘ್ರ ಗುಣಮುಖವಾಗಬೇಕು ಎಂಬ ಮನೋಭಾವ ಜನರಲ್ಲಿದ್ದು ಪ್ರವೃತ್ತಿ ಬದಲಾಗಬೇಕು’ ಎಂದರು.
‘ಶೇ 90ರಷ್ಟು ಮಂದಿ ಅಲೋಪಥಿ ಔಷಧಿಗೆ ಒಗ್ಗಿಕೊಂಡಿದ್ದು ಆಯುರ್ವೇದ ಔಷಧ ಹಾಗೂ ಮನೆಯ ಮದ್ದಿನ ಮೌಲ್ಯ ಕಡಿಮೆಯಾಗಿದೆ. ಪ್ರಸ್ತುತ ಒತ್ತಡದ ಜೀವನಶೈಲಿ ಹೆಚ್ಚಾಗಿದ್ದು ಮಾನಸಿಕ ಸದೃಢತೆ ಕ್ಷೀಣವಾಗುತ್ತಿದೆ. ಒತ್ತಡ ರಹಿತ ಸುಸ್ಥಿರ ಜೀವನ ರೂಪಿಸಿಕೊಳ್ಳಬೇಕು. ಎಂತಹ ಸವಾಲಿನ ಸನ್ನಿವೇಶಗಳು ಎದುರಾದರೂ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಬದುಕಬೇಕು. ಉತ್ತಮ ಜೀವನಶೈಲಿ ಪಾಲಿಸುವ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಪ್ರತಿದಿನ ಮನಸ್ಸನ್ನು ಕೇಂದ್ರೀಕರಿಸಲು, ಚೈತನ್ಯಗೊಳಿಸಲು ಯೋಗಭ್ಯಾಸ, ಧ್ಯಾನ, ಸೂರ್ಯ ನಮಸ್ಕಾರ ಮಾಡಬೇಕು. ಇದರಿಂದ ಒತ್ತಡದಿಂದ ಮುಕ್ತರಾಗಬಹುದಾಗಿದೆ. ಸಾರ್ವಜನಿಕರು ಆಯುರ್ವೇದದ ಮಹತ್ವ ಅರಿತು ಪಾಲಿಸಬೇಕು, ಆಯುರ್ವೇದದಿಂದಾಗುವ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಹೇಳಿ, ಜನಜಾಗೃತಿ ಮೂಡಿಸಿ ಎಲ್ಲೆಡೆ ಪಸರಿಸಬೇಕು’ ಎಂದು ಚಿದಂಬರ ಹೇಳಿದರು.
ನಗರಸಭಾ ಸದಸ್ಯರಾದ ಕಲಾವತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಪಿ.ಸತೀಶ್ ಕುಮಾರ್, ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುನೀತ್ ಬಾಬು, ಶಾಲಾ ಕಾಲೇಜು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಇದ್ದರು.
‘ಶೇ 90ರಷ್ಟು ಮಂದಿ ಅಲೋಪತಿ ಚಿಕಿತ್ಸೆಯತ್ತ ಒಲವು’ ‘ಆಯುರ್ವೇದ ಚಿಕಿತ್ಸೆಯಲ್ಲಿ ಅಡ್ಡಪರಿಣಾಮ ಇಲ್ಲ’ ‘ಜಗತ್ತಿಗೆ ಆಯುರ್ವೇದ ಪರಿಚಹಿಸಿದ ಭಾರತ’
ಆಯುರ್ವೇದವನ್ನು ಪಾಲಿಸಿ ‘ಆಯುರ್ವೇದವನ್ನು ಮುಖ್ಯವಾಹಿನಿಗೆ ತಂದು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸಬೇಕು. ಆಯುರ್ವೇದದ ಮಹತ್ವವನ್ನು ವಿಶ್ವಕ್ಕೆ ಪ್ರಚುರಪಡಿಸಲು 2016ರಿಂದ ಪ್ರತಿವರ್ಷ ಸೆ.23ರಂದು ಆಯುವೇದ ದಿನ ಆಚರಿಸಲಾಗುತ್ತದೆ. ಆಯುರ್ವೇದದ ಅಧಿದೇವತೆ ಧನ್ವಂತರಿ ನೀಡಿರುವ ಕೊಡುಗೆಯಾಗಿರುವ ಆಯುರ್ವೇದವನ್ನು ಪಾಲಿಸಬೇಕು. ಜಗತ್ತನ್ನು ಆಯುರ್ವೇದದ ಮೂಲಕ ಆರೋಗ್ಯಪೂರ್ಣವಾಗಿಸುವ ಸದುದ್ದೇಶದಿಂದ ಭಾರತ ವಿಶ್ವಕ್ಕೆ ಆಯುರ್ವೇದವನ್ನು ಪರಿಚಯಿಸಿ ಮಹತ್ವ ತಿಳಿಸಿಕೊಟ್ಟಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಲೀಲಾವತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.