ಯಳಂದೂರು: ತಾಲ್ಲೂಕಿನ ಅಂಬಳೆ ಸಮೀಪದ ತೋಟದ ಮನೆಯಲ್ಲಿ ಶನಿವಾರ ಸುಂದರ ಕಟ್ಟು ತೋಳ ಹಾವು ಸಿಕ್ಕಿದೆ. ಮೂರು ಪ್ರಭೇದದ ತೋಳ ಹಾವುಗಳಲ್ಲಿ ಇದು ಭಿನ್ನವಾಗಿದೆ. ಶರೀರದ ಬಣ್ಣ ಕಪ್ಪು ಮಿಶ್ರಿತ ಹಳದಿಯಾಗಿದ್ದು, ಬೆನ್ನಿನ ಮೇಲೆ ಬಿಳಿ ವರ್ಣದ ಅಡ್ಡ ಕಟ್ಟು ಹೊಂದಿದೆ. ದುಂಡಗಿನ ಆಕರ್ಷಕ ಕಣ್ಣುಗಳನ್ನು ಹೊಂದಿರುವ ವಿಷ ರಹಿತವಾದ ಉರಗವಾಗಿದೆ. ಇವುಗಳನ್ನು ಕಟ್ಟಾವುಗಳೆಂದು ಭಾವಿಸಿ ಕೊಲ್ಲುತ್ತಾರೆ ಎಂದು ಉರಗ ತಜ್ಞರು ಹೇಳುತ್ತಾರೆ.
ತುಳು ನಾಡಿನಲ್ಲಿ ತೋಳಹಾವನ್ನು ಕಟ್ಟ ಬುಳಕರಿ ಎಂತಲೂ ಕರೆಯುತ್ತಾರೆ. ಮನೆಯ ಮಾಡು, ಬಾಗಿಲ ಸಂದಿ, ಸಣ್ಣ ಬಿಲಗಳ ಬಳಿ ಇದ್ದು, ಹಲ್ಲಿ, ಇಲಿ, ಕಪ್ಪೆ ಹಾಗೂ ಓತಿಕ್ಯಾತ ಭಕ್ಷಿಸುತ್ತವೆ, ಕೆಲವೆಡೆ ಜುಲೈ ಸಮಯದಲ್ಲಿ ಮೊಟ್ಟೆ ಇಟ್ಟು, ಸೆಪ್ಟೆಂಬರ್ ಸಮಯದಲ್ಲಿ ಮರಿ ಮಾಡುತ್ತವೆ, ಹೆಣ್ಣಾವುಗಳು ಮೊಟ್ಟೆಯನ್ನು ಜೋಪಿಡುತ್ತವೆ. ರಾತ್ರಿ ಸಂಚಾರಿಯಾಗಿದ್ದು, ರೈತರಿಗೆ ನೆರವಾಗಿವೆ. ಈ ಹಾವುಗಳ ಮೊಟ್ಟೆಗಳು ಮನೆಯ ಜಿರಲೆ ಬಿಲದಲ್ಲಿ ಹಾಗೂ ಗೋಡೆ ಬಿರುಕಿನಲ್ಲಿ ಇರುತ್ತವೆ ಎಂದು ಸಂತೇಮರಹಳ್ಳಿ ಸ್ನೇಕ್ ಮಹೇಶ್ ಹೇಳಿದರು.
ಈ ಹಾವುಗಳು ಕಡಂಬಳ ಹಾವುಗಳನ್ನು ಹೋಲುವುದರಿಂದ ವಿಷದ ಹಾವು ಎಂದು ಕೊಲ್ಲುವವರೇ ಹೆಚ್ಚು. ಆದರೆ, ತೋಳಗಳ ಹಾವುಗಳ ದೇಹದ ತುಂಬ 12 ರಿಂದ 20 ಬಿಳಿ ಕಟ್ಟುಗಳಿದ್ದು, ವಿಷದ ಹಾವುಗಳಿಂದ ಪ್ರತ್ಯೇಕಿಸಬಹುದು. ಹಾಗಾಗಿ, ಈ ಹಾವುಗಳನ್ನು ಕೊಲ್ಲದೆ ರಕ್ಷಿಸಬೇಕು ಎಂದು ಸ್ನೇಕ್ ಮಂಜು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.