ADVERTISEMENT

ಬಂಡೀಪುರ: ಗಿರಿಜನರಿಗೆ ಕ್ಯಾಂಟೀನ್‌ ನಿರ್ವಹಣೆ ಹೊಣೆ

ತಮಿಳುನಾಡು ಮಾದರಿ ಅನುಸರಿಸಿದ ಅರಣ್ಯ ಇಲಾಖೆ, ಸ್ಥಳೀಯರ ವಿಶ್ವಾಸ ಗಳಿಸುವ ಯತ್ನ

ಮಲ್ಲೇಶ ಎಂ.
Published 7 ಡಿಸೆಂಬರ್ 2019, 10:09 IST
Last Updated 7 ಡಿಸೆಂಬರ್ 2019, 10:09 IST
ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಪ್ರದೇಶದಲ್ಲಿ ನೆಲೆಸಿರುವ ಜನರ ವಿಶ್ವಾಸ ಗಳಿಸುವ ಯತ್ನದ ಭಾಗವಾಗಿ ಅರಣ್ಯ ಇಲಾಖೆಯು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗ ಬಂಡೀಪುರ ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್‌ ನಿರ್ವಹಣೆಯ ಹೊಣೆಯನ್ನು ಸ್ಥಳೀಯರಿಗೆ ನೀಡಿದೆ.

ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಕಾರೆಮಾಳದ‍ಪರಿಸರ ಅಭಿವೃದ್ಧಿ ಸಮಿತಿ ಕ್ಯಾಂಟೀನ್‌ ನಡೆಸುತ್ತಿದೆ. ಸ್ಥಳೀಯರಿಗೆ ಅವಕಾಶ ನೀಡಿ ಎಂದು ಇಲ್ಲಿನ ಗಿರಿಜನ ಕಾಲೊನಿಯ ಪರಿಸರ ಅಭಿವೃದ್ಧಿ ಸಮಿತಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರಿಗೆ ಮನವಿ ಮಾಡಿತ್ತು. ಮನವಿಗೆ ತಕ್ಷಣವೇ ಸ್ಪಂದಿಸಿರುವ ಅವರು, ಸ್ಥಳೀಯರಿಗೆ ಉದ್ಯೋಗ ಸಿಗಲಿ ಎಂಬ ಉದ್ದೇಶದಿಂದ ಸ್ಥಳೀಯ ಸಮಿತಿಗೆ ಜವಾಬ್ದಾರಿ ನೀಡಿದ್ದಾರೆ.

ಇಲ್ಲಿ ಹಿಂದೆ ಮೈಸೂರಿನವರು ಕ್ಯಾಂಟೀನ್‌ ನಡೆಸುತ್ತಿದ್ದರು. ಆಹಾರದ ರುಚಿ ಹಾಗೂ ಗುಣಮಟ್ಟದ ಬಗ್ಗೆ ಸಿಬ್ಬಂದಿ ಹಾಗೂ ಪ್ರವಾಸಿಗರಿಂದ ದೂರುಗಳೂ ಬಂದಿದ್ದವು. ಅವರ ಗುತ್ತಿಗೆ ಅವಧಿ ಮುಗಿದ ನಂತರ, ಅರಣ್ಯ ಇಲಾಖೆ ಬೇರೆಯವರಿಗೆ ಗುತ್ತಿಗೆ ನೀಡಿರಲಿಲ್ಲ.

ADVERTISEMENT

ಉತ್ತಮ ಸ್ಪಂದನೆ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಂಡೀಪುರಕ್ಕೆ ಭೇಟಿ ನೀಡುವ ಬಂಡೀಪುರದಲ್ಲಿ ಉತ್ತಮ ಆಹಾರ ಸಿಗುವುದಿಲ್ಲ ಎಂಬ ದೂರು ಮೊದಲಿನಿಂದಲೂ ಇತ್ತು. ತಿಂಗಳಿನಿಂದೀಚೆಗೆ ಸ್ಥಳೀಯರು ಕ್ಯಾಂಟೀನ್‌ ನಡೆಸುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.

ಎಂಟು ಮಂದಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಿತಿಯ ಖಾತೆಯಲ್ಲಿದ್ದ ₹ 80 ಸಾವಿರ ಹಣವನ್ನು ಬಂಡವಾಳವಾಗಿ ಹೂಡಲಾಗಿದೆ. ಇಲಾಖೆಯ ಸಹಕಾರದೊಂದಿಗೆ ಉತ್ತಮವಾಗಿ ನಡೆಯುತ್ತಿದೆ. ‌ಬರುವ ಆದಾಯದಲ್ಲಿ ಶೇ 20ರಷ್ಟು ಸಮಿತಿಗೆ ಸಿಗಲಿದೆ. ಉಳಿದ ಆದಾಯದಲ್ಲಿ ಸಿಬ್ಬಂದಿ ಸಂಬಳ, ಖರ್ಚುಗಳನ್ನು ನಿರ್ವಹಿಸಲಾಗುತ್ತಿದೆ. ಕ್ಯಾಂಟೀನ್‌ ಆರಂಭಿಸಲು ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಅರಣ್ಯ ಇಲಾಖೆ ಒದಗಿಸಿದೆ.

ಸಫಾರಿಗೆ ಬರುವ ಪ್ರವಾಸಿಗರು, ಪ್ರಯಾಣಿಕರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ‌ ಕ್ಯಾಂಪಸ್ಸಿನಲ್ಲಿ ಉಳಿಯುವ ಅತಿಥಿಗಳು ಕ್ಯಾಂಟೀನ್‌ನ ಉಪಯೋಗ ಪಡೆಯುತ್ತಿದ್ದು‌, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಸವಿಯುತ್ತಿದ್ದಾರೆ.

‘ಸಮಿತಿ ಮೂಲಕ ಏನಾದರೂ ಮಾಡಬೇಕು ಎಂಬ ಆಸೆಯಿತ್ತು. ಯೋಜನೆ ನಿರ್ದೇಶಕರಿಗೆ ಮನವಿ ಮಾಡಿಕೊಂಡಾಗ ಅವಕಾಶ ಕಲ್ಪಿಸಿದರು. ಕ್ಯಾಂಟೀನ್‌ಗೆ ಬಂದವರಿಗೆ ರುಚಿಕರ ಹಾಗೂ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೇವೆ’ ಎಂದು ಸಮಿತಿಯ ಸದಸ್ಯೆ ಪುಟ್ಟಮ್ಮ ತಿಳಿಸಿದರು.

ತಮಿಳುನಾಡು ಮಾದರಿ
ಬಂಡೀ‍ಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದ ಕ್ಯಾಂಪಸ್‌ನಲ್ಲಿ ಅಲ್ಲಿನ ಅರಣ್ಯದ ಅಂಚಿನ ಗಿರಿಜನರು ಆಹಾರ ಮಳಿಗೆಗಳನ್ನು ನಡೆಸುತ್ತಿದ್ದಾರೆ. ಪ್ರವಾಸಿಗರಿಗೆ ಹಾಗೂ ಸಿಬ್ಬಂದಿಗೆ‌ಗುಣಮಟ್ಟದ ಆಹಾರ ನೀಡುತ್ತಾ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.ಅದೇ ಮಾದರಿಯನ್ನು ಬಂಡೀಪುರದಲ್ಲಿ ಅರಣ್ಯ ಇಲಾಖೆ ಅನುಸರಿಸಿದೆ.

ಸ್ಥಳೀಯರಿಗೆ ಆದ್ಯತೆ: ‘ಬಂಡೀಪುರದಲ್ಲಿ ನಗರ‌ ಪ್ರದೇಶವರಿಗೆ ನೀಡುತ್ತಿದ್ದ ಅವಕಾಶವನ್ನು ಇನ್ನು ಮುಂದೆ ಸ್ಥಳೀಯರಿಗೆ ನೀಡಲಿದ್ದೇವೆ. ಇದರಿಂದಾಗಿ ಅವರಿಗೆ ಬದುಕು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.