
ಗುಂಡ್ಲುಪೇಟೆ: ವಿಶ್ವದಲ್ಲಿರುವ ದೊಡ್ಡ ಬೆಕ್ಕು ಪ್ರಬೇಧಗಳ ರಕ್ಷಣೆಯ ಗುರಿಯೊಂದಿಗೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತರ ರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯ ಎರಡನೇ ದಿನವಾದ ಮಂಗಳವಾರ ವನ್ಯಜೀವಿಗಳ ರಕ್ಷಣೆ ಕುರಿತು ಚರ್ಚೆ, ಸಂವಾದ, ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.
ವಿಶ್ವದ 23 ದೇಶಗಳ 39 ಪ್ರತಿನಿಧಿಗಳು ಭಾಗವಹಿಸಿ ದೊಡ್ಡ ಬೆಕ್ಕುಗಳ ಸಂತತಿ ಉಳಿವಿನ ಕುರಿತು ವಿಚಾರ ವಿನಿಮಯ, ತಾಂತ್ರಿಕ ವಿಚಾರಗಳ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಪ್ರತಿನಿಧಿಗಳು ವನ್ಯಜೀವಿಗಳ ರಕ್ಷಣೆ ಮತ್ತು ಆವಾಸಸ್ಥಾನಗಳ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.
ಕಳ್ಳಬೇಟೆ ತಡೆ, ವಿರೋಧಿ ಶಿಬಿರಗಳು, ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಅರಣ್ಯ ವೀಕ್ಷಕರೊಂದಿಗೆ ಸಂವಾದ ನಡೆಸಿದರು. ಕಾಡಿನೊಳಗೆ ನೀರಿನ ತೊಟ್ಟಿ, ಸೌರ-ಚಾಲಿತ ಬೋರ್‌ವೆಲ್‌ಗಳ ಅಳವಡಿಕೆ, ಉಪಯೋಗ ಹಾಗೂ ಹುಲ್ಲುಗಾವಲು ಪ್ರದೇಶಗಳಿಗೆ ಭೇಟಿ ನೀಡಿ ಕಳೆ ಕಸ್ಯಗಳಾದ ಲಂಟಾನಾ ಸೆನ್ನಾ ಸ್ಪೆಕ್ಟಾಬಿಲ್ಸ್‌ನಂತಹ ಆಕ್ರಮಣಕಾರಿ ಕಳೆ ಪ್ರಭೇದಗಳನ್ನು ತೆಗೆದುಹಾಕಿ ಹುಲ್ಲುಗಾವಲು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಾನವ ಪ್ರಾಣಿ ಸಂಘರ್ಷ ತಡೆಗೆ ನಿರ್ಮಾಣ ಮಾಡಿರುವ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ವೀಕ್ಷಿಸಿದರು. ವನ್ಯಜೀವಿ ಸಂರಕ್ಷಣಾ ಪರಿಕರಗಳು ಮತ್ತು ಸಲಕರಣೆಗಳ ಪ್ರದರ್ಶನ ಆಯೋಜಿಸಲಾಗಿತ್ತು. ಆನೆ ಮತ್ತು ಚಿರತೆ ಕಾರ್ಯಪಡೆ ತಂಡದ ಸದಸ್ಯರೊಂದಿಗೆ ಸಂವಾದ ನಡೆಯಿತು.
ಪರಿಸರ ವ್ಯವಸ್ಥೆ ಮತ್ತು ಪ್ರಾಣಿಗಳ ಆವಾಸಸ್ಥಾನಗಳ ಕುರಿತು ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಮಾತನಾಡಿದರು. ವನ್ಯಜೀವಿ ಸಂರಕ್ಷಣೆಗೆ ಇರುವ ಕಾನೂನುಗಳ ಕುರಿತು ಅಪರಾಧ ತನಿಖಾ ವಿಭಾಗದ ಕಾನೂನು ಸಲಹೆಗಾರ ಮಹೇಶ್ ವಿ.ವೈದ್ಯ, ಪರಿಸರ ವ್ಯವಸ್ಥೆಯ ಮೌಲ್ಯಮಾಪನ ಕುರಿತು ಐಯೋರಾ ಸಿಇಒ ಸ್ವಪನ್ ಮೆಹ್ರಾ, ಆವಾಸಸ್ಥಾನಗಳ ಪುನಸ್ಥಾಪನೆ ಕುರಿತು ಭೂ ದೃಶ್ಯ ಪುನರ್ವಸತಿ ತಜ್ಞ ಡಾ.ಥಾರ್ಶ್ ಮಾತನಾಡಿದರು.
ವನ್ಯಜೀವಿ ಪ್ರವಾಸೋದ್ಯಮ ಕುರಿತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೋಹನ್ ರಾಜ್ ಮಾತನಾಡಿದರು. ಬಂಡೀಪುರದಲ್ಲಿ ವನ್ಯಜೀವಿಗಳ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳನ್ನು ಬೇರೆ ದೇಶಗಳಲ್ಲಿ ಹೇಗೆ ಅಳವಡಿಕೆ ಮಾಡಿಕೊಳ್ಳಬಹುದು ಎಂಬ ಕುರಿತ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಫೆ.11ರಂದು ಕ್ಷೇತ್ರ ಭೇಟಿ ಹಾಗೂ ಕಾರ್ಯಾಗಾರದ ಸಮಾರೋಪ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.