ADVERTISEMENT

ಧನ್ವೀರ್‌ ವಿರುದ್ಧ ಎಫ್‌ಐಆರ್‌, ವಿಚಾರಣೆಗೆ ಹಾಜರ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 16:51 IST
Last Updated 24 ಅಕ್ಟೋಬರ್ 2020, 16:51 IST
ವಿಚಾರಣೆಗೆ ಹಾಜರಾದ ಧನ್ವೀರ್ ಹಾಗೂ ಸ್ನೇಹಿತರು
ವಿಚಾರಣೆಗೆ ಹಾಜರಾದ ಧನ್ವೀರ್ ಹಾಗೂ ಸ್ನೇಹಿತರು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿದ ಆರೋಪ ಎದುರಿಸುತ್ತಿರುವ ನಟ ಧನ್ವೀರ್‌ ಗೌಡ ವಿರುದ್ಧ ಅಧಿಕಾರಿಗಳು ಅತಿಕ್ರಮ ಪ್ರವೇಶ ಆರೋಪದ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್‌ ಅವರು ಶನಿವಾರ ಬೆಳಿಗ್ಗೆ ವಿಚಾರಣೆಗೂ ಹಾಜರಾಗಿದ್ದಾರೆ.ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿಯ ಕಚೇರಿಯಲ್ಲಿ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ವಿಚಾರಣೆ ನಡೆಸಿದ್ದಾರೆ‌.

ರಾತ್ರಿ ಸಫಾರಿ ಮಾಡಿದ್ದೀರಾ? ಸಫಾರಿಗೆ ಅನುಮತಿ ನೀಡಿದ್ದು ಯಾರು? ಎಷ್ಟು ಗಂಟೆಗೆ ಸಫಾರಿಗೆ ತೆರಳಿದ್ದೀರಿ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿದೆ.

ADVERTISEMENT

‘ಇದಕ್ಕೆ ಉತ್ತರಿಸಿದ ನಟ, ‘ನಾನು ಸಫಾರಿಗೆ ಸಂಜೆ ಸಮಯದಲ್ಲಿ ತೆರಳಿದ್ದೇನೆ. 5.30ಕ್ಕೆ ಹೊರಟು ವಾಪಸ್‌ ಬರುವಷ್ಟರಲ್ಲಿ 6.30 ಆಗಿತ್ತು. ಕತ್ತಲೆ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಾಕುವಾಗ ರಾತ್ರಿ ಎಂಬು ತಪ್ಪಾಗಿ ನಮೂದಿಸಿದ್ದೇನೆ, ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ಪರಿಸರ ಪ್ರೀಯರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ತಿಳಿಸಿದ್ದಾರೆ. ದಂಡವನ್ನೂ ಪಾವತಿ ಮಾಡಿದ್ದಾರೆ’ ಎಂದು ನವೀನ್ ಕುಮಾರ್ ಅವರು ತಿಳಿಸಿದರು.

ಬಂಡೀಪುರದಲ್ಲಿ ಧನ್ವೀರ್‌ ಹಾಗೂ ಸ್ನೇಹಿತರು ರಾತ್ರಿ ವೇಳೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಪರಿಸರ ಪ್ರಿಯರಿಂದಆಕ್ರೋಶ ವ್ಯಕ್ತವಾಗಿತ್ತು.

ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ನಾವು ರಾತ್ರಿ ಸಫಾರಿಗೆ ಅನುಮತಿ ಕೊಟ್ಟಿಲ್ಲ. ರಾತ್ರಿ ಸಫಾರಿ ಮಾಡಿದ್ದೇ ಆದಲ್ಲಿ ಅದು ಅರಣ್ಯ ಅತಿಕ್ರಮ ಪ್ರವೇಶವಾಗುತ್ತದೆ. ಹಾಗಾಗಿ ಎಫ್‌ಐಆರ್‌ ದಾಖಲಿಸಿದ್ದೇವೆ. ಶನಿವಾರ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಸಂಜೆ ಹೊತ್ತಿಗೆ ಸಫಾರಿ ಹೋಗಿದ್ದಾಗಿ, ಬರುವಾಗ 10 ನಿಮಿಷ ತಡವಾಗಿದ್ದಾಗಿ ಅವರು ಹೇಳಿದ್ದಾರೆ. ಸಾಮಾಜಿಕ ತಾಲ ತಾಣದಲ್ಲಿ ರಾತ್ರಿ ಎಂದು ತಪ್ಪಾಗಿ ನಮೂದಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.