ADVERTISEMENT

ಬಂಡೀಪುರ ಹುಲಿ ಯೋಜನೆಗೆ 47 ವರ್ಷ

ಇಂದಿರಾ ಗಾಂಧಿ ಸರ್ಕಾರದಿಂದ ಘೋಷಣೆ, ದೇಶದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 16:18 IST
Last Updated 17 ನವೆಂಬರ್ 2020, 16:18 IST
1973ರ ನವೆಂಬರ್‌ 17ರಂದು ಹುಲಿ ಯೋಜನೆ ಘೋಷಿಸಿದ ಮುಖ್ಯಮಂತ್ರಿ ದೇವರಾಜ ಅರಸ್ ಅವರೊಂದಿಗೆ ಅಂದಿನ ಐಎಫ್‌ಎಸ್‌ ಅಧಿಕಾರಿ ಎಸ್‌.ಜಿ.ನೇಗಿನಹಾಳ್‌ (ಅರಣ್ಯ ಇಲಾಖೆಯ ಸಂಗ್ರಹ ಚಿತ್ರ)
1973ರ ನವೆಂಬರ್‌ 17ರಂದು ಹುಲಿ ಯೋಜನೆ ಘೋಷಿಸಿದ ಮುಖ್ಯಮಂತ್ರಿ ದೇವರಾಜ ಅರಸ್ ಅವರೊಂದಿಗೆ ಅಂದಿನ ಐಎಫ್‌ಎಸ್‌ ಅಧಿಕಾರಿ ಎಸ್‌.ಜಿ.ನೇಗಿನಹಾಳ್‌ (ಅರಣ್ಯ ಇಲಾಖೆಯ ಸಂಗ್ರಹ ಚಿತ್ರ)   

ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ ವ್ಯಾಘ್ರಗಳ ಸಂತತಿಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆಈಗ 47ರ ಹರೆಯ.

ದೇಶದ ಪ್ರಮುಖ ಹುಲಿ ರಕ್ಷಿತಾರಣ್ಯವಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ‘ಹುಲಿ ಯೋಜನೆ’ ಎಂದು ಘೋಷಣೆಯಾಗಿ ಮಂಗಳವಾರಕ್ಕೆ (ನವೆಂಬರ್‌ 17) 47 ವರ್ಷಗಳು ಸಂದಿವೆ. 1973ರ ನವೆಂಬರ್‌ 17ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಹುಲಿ ಯೋಜನೆ’ಗೆ ಚಾಲನೆ ನೀಡಿದ್ದರು.

ದೇಶದಲ್ಲಿ ಹುಲಿಗಳ ಸಂರಕ್ಷಣೆಯ ಉದ್ದೇಶದಿಂದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದ್ದ ಈ ನಿರ್ಧಾರದಿಂದಾಗಿ, ಕಾಡುಗಳ ವಿಸ್ತೀರ್ಣ ಕಿರಿದಾಗುತ್ತಾ, ಜನರ ಸಂಖ್ಯೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲೂ ಹುಲಿಗಳನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ ಪರಿಸರ ತಜ್ಞರು ಹಾಗೂ ವನ್ಯಜೀವಿ ಪ್ರೇಮಿಗಳು.

ADVERTISEMENT

ವೇಣುಗೋಪಾಲ ವನ್ಯಜೀವಿ ಉದ್ಯಾನ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಸೇರಿಸಿ 19‌41ರ ಫೆಬ್ರುವರಿ 19ರಂದು ರಾಷ್ಟ್ರೀಯ ಉದ್ಯಾನವನ್ನು ಘೋಷಿಸಲಾಗಿತ್ತು. 1973ರಲ್ಲಿ ಹುಲಿ ಯೋಜನೆ ಘೋಷಿಸುವಾಗ ಈ ಅರಣ್ಯದಲ್ಲಿ 13 ಹುಲಿಗಳು ಇದ್ದವು. ಅರಣ್ಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಈಗ ಇಲ್ಲಿ 126ರಿಂದ 167 ಹುಲಿಗಳಿವೆ.

1985ರಲ್ಲಿ ಈ ಹುಲಿ ಯೋಜನೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು ಹೆಸರಿಸಲಾಗಿತ್ತು. ಆಗ ಈ ಉದ್ಯಾನದ ವಿಸ್ತೀರ್ಣ 874.20 ಚದರ ಕಿ.ಮೀ ಇತ್ತು. ನಂತರದ ವರ್ಷಗಳಲ್ಲಿ ಸುತ್ತಮುತ್ತಲಿನ ಅರಣ್ಯವನ್ನು ಮತ್ತಷ್ಟು ಸೇರ್ಪಡೆಗಳಿಸಲಾಗಿದೆ. ತಮಿಳುನಾಡಿನ ಮಧುಮಲೆ, ಕೇರಳದ ವಯನಾಡು ಹಾಗೂ ನಮ್ಮದೇ ಆದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸಂರಕ್ಷಿತ ಪ್ರದೇಶ ಸದ್ಯ 912.04 ಚದರ ಕಿ.ಮೀ ವಿಸ್ತೀರ್ಣವಿದೆ.

ಆನೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, 1,500ಕ್ಕಿಂತಲೂ ಹೆಚ್ಚು ಆನೆಗಳು ಇಲ್ಲಿವೆ ಎಂದು ಅಂದಾಜಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಪದೇ ಪದೇ ಹುಲಿಗಳು ಕಾಣಿಸಿಕೊಳ್ಳುತ್ತಿವೆ.

ಲಂಟಾನಾ ಸಮಸ್ಯೆ: ಹುಲಿ ಸಂರಕ್ಷಿತ ಪ್ರದೇಶವನ್ನು ಕಳೆ ಗಿಡ ಲಾಂಟಾನದ ಸಮಸ್ಯೆ ಕಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ಶೇ 60ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ಇದು ವ್ಯಾಪಿಸಿದೆ. ಇದರಿಂದಾಗಿ ಅರಣ್ಯದಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ಕೊರತೆ ಕಾಡುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪರಿಸರ ಪ್ರಿಯರು.

‘ನವೆಂಬರ್‌ 17 ನಮಗೆ‌ ಅತ್ಯಂತ ಮಹತ್ವದ ದಿನ. ಬಂಡೀಪುರ ಹುಲಿ ಯೋಜನೆಗೆ ಸೇರ್ಪಡೆ ದಿನದ ಅಂಗವಾಗಿ ನಾವು ಕಾರ್ಯಕ್ರಮವನ್ನು ಶೀಘ್ರ ಹಮ್ಮಿಕೊಳ್ಳಲಿದ್ದೇವೆ’ ಎಂದು ಹುಲಿ ಯೋಜನೆ ನೂತನ ನಿರ್ದೇಶಕ ಎಸ್‌.ಆರ್‌.ನಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.