ADVERTISEMENT

ಬಂಡೀಪುರ: 2,828 ಕಿ.ಮೀ ಬೆಂಕಿ ರೇಖೆ, 435 ವಾಚರ್‌ಗಳ ನೇಮಕ

ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆಯಿಂದ ಮುನ್ನೆಚ್ಚರಿಕೆ, ವಾಯುಪಡೆಯ ನೆರವು ಪಡೆಯಲು ಯೋಚನೆ

ಮಲ್ಲೇಶ ಎಂ.
Published 13 ಜನವರಿ 2021, 13:36 IST
Last Updated 13 ಜನವರಿ 2021, 13:36 IST
ಕಾಡಿನ ಒಳಗಡೆ ಬೆಂಕಿ ರೇಖೆ ನಿರ್ಮಾಣದಲ್ಲಿ ತೊಡಗಿರುವ ಸಿಬ್ಬಂದಿ
ಕಾಡಿನ ಒಳಗಡೆ ಬೆಂಕಿ ರೇಖೆ ನಿರ್ಮಾಣದಲ್ಲಿ ತೊಡಗಿರುವ ಸಿಬ್ಬಂದಿ   

ಗುಂಡ್ಲುಪೇಟೆ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, 2,828 ಕಿ.ಮೀ ಉದ್ದ ಬೆಂಕಿ ರೇಖೆ (ಫೈರ್‌ ಲೈನ್‌) ನಿರ್ಮಾಣ ಮಾಡಿದೆ.

ಇದರ ಜೊತೆಗೆ ಬೆಂಕಿ ಮೇಲೆ ನಿಗಾ ಇಡುವುದಕ್ಕಾಗಿ ತಾತ್ಕಾಲಿಕ ಅವಧಿಗೆ 445 ಮಂದಿ ವಾಚರ್‌ಗಳನ್ನು ನೇಮಕ ಮಾಡಲಾಗಿದೆ.

2019ರಲ್ಲಿ ಕಾಳ್ಗಿಚ್ಚು ಉಂಟಾಗಿ 11 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದಾಗಿ ಎಲ್ಲೂ ಕಾಳ್ಗಿಚ್ಚು ಕಂಡು ಬಂದಿರಲಿಲ್ಲ. ಈ ವರ್ಷವೂ ಬೆಂಕಿ ಅನಾಹುತ ಸಂಭವಿಸಬಾರದು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಪಣತೊಟ್ಟಿದ್ದಾರೆ.

ADVERTISEMENT

2019ರಲ್ಲಿ ಸ್ಥಳೀಯರೇ ಬೆಂಕಿ ಹಾಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಹಾಗಾಗಿ, ಕಾಡಂಚಿನ ಪ್ರದೇಶದ ಜನರನ್ನು ವಿಶ್ವಾಸಗಳಿಸಲು ಇಲಾಖೆ ಕಳೆದ ವರ್ಷ ಹಲವು ಕ್ರಮಗಳನ್ನು ಕೈಗೊಂಡಿತ್ತು. ಇದು ಫಲವೂ ನೀಡಿತ್ತು.ಈ ವರ್ಷವೂ ಅದನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.ಕಾಡಿನಿಂದಾಗುವ ಅನುಕೂಲದ ಬಗ್ಗೆ ಹಾಗೂ ಬೆಂಕಿ ಬಿದ್ದರೆ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸಲು ಬೀದಿನಾಟಕಗಳ, ಕರಪತ್ರ ಹಂಚಿಕೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ದಾರಿಮಧ್ಯೆ ವಾಹನ ನಿಲುಗಡೆ ಮಾಡದಂತೆ ಮತ್ತು ಸಂಚಾರದ ಸಮಯದಲ್ಲಿ ಧೂಮಪಾನ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ 50 ಮೀಟರ್ ಅಗಲಕ್ಕೆ ಬೆಂಕಿ ರೇಖೆ ನಿರ್ಮಾಣ ಮಾಡಲಾಗುತ್ತದೆ. ಕೆಲವು ಚಾಲಕರು ಬೀಡಿ ಸಿಗರೇಟ್ ಸೇದಿ ಎಸೆದಾಗ ಅದರಲ್ಲಿರುವ ಬೆಂಕಿಯ ಕಿಡಿಯಿಂದ ಬೆಂಕಿ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್ಚು ಅಗಲದ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ’ ಎಂದರು.

ಅಕಾಲಿಕ ಮಳೆಯಿಂದ ಅನುಕೂಲ?:ವಾರದಿಂದೀಚೆಗೆ ಸಣ್ಣ ಪ್ರಮಾಣದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಸಿರು ಮತ್ತೆ ಚಿಗುರಲು ಆರಂಭಿಸಲಿದೆ. ಇದರಿಂದಾಗಿ ಒಣಹುಲ್ಲು ಕಡಿಮೆಯಾಗಲಿದೆ. ಒಂದು ವೇಳೆ ಬೆಂಕಿ ಬಿದ್ದರೂ ಹೆಚ್ಚು ದೂರಕ್ಕೆ ಹರಡುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ.

ಹಸಿರು ಚಿಗುರಿದರೆ ಕಾಡು ಪ್ರಾಣಿಗಳಿಗೆ ಮೇವಿಗೆ ಸಮಸ್ಯೆಯಾಗುವುದಿಲ್ಲ ಎಂಬುದು ಅವರ ಅನಿಸಿಕೆ.

ಸೇನೆಯ ನೆರವು ಬಳಕೆಗೆ ಚಿಂತನೆ

2019ರಲ್ಲಿ ಬೆಂಕಿ ಬಿದ್ದ ಸಂದರ್ಭದಲ್ಲಿ ಅದನ್ನು ನಂದಿಸಲು ಅರಣ್ಯ ಇಲಾಖೆ ವಾಯು ಸೇನೆಯ ಮೊರೆ ಹೋಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಈ ವರ್ಷವೂ ವಾಯುಪಡೆ ಸಹಾಯ ಪಡೆಯಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಸೇನೆಯ ಅಧಿಕಾರಿಗಳೊಂದಿಗೂ ಚರ್ಚಿಸಿದ್ದಾರೆ.

ಕಾಳ್ಗಿಚ್ಚು ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು, ‘ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಾಡಂಚಿನ ಗ್ರಾಮದ ಭಾಗದಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಬೆಂಕಿ ವಾಚರ್‌ಗಳು ಹಾಗೂ ನಮ್ಮ ಇಲಾಖೆಯ ಸಿಬ್ಬಂದಿ ಸೇರಿ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅರಣ್ಯ ಸಿಬ್ಬಂದಿ ಹೋಗಲಾಗದ ದುರ್ಗಮ ಅರಣ್ಯದಲ್ಲಿ ಬೆಂಕಿ ಬಿದ್ದರೆ ವಾಯುಪಡೆ ಹೆಲಿಕಾಪ್ಟರ್‌ಗಳ ಸಹಾಯ ಪಡೆಯಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸೇನಾ ತರಬೇತಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.