ADVERTISEMENT

ಗುಂಡ್ಲುಪೇಟೆ | ಬಂಡೀಪುರ ಅರಣ್ಯ: ಪ್ರವಾಸಿಗರ ಪುಂಡಾಟ

ಅರಣ್ಯ ಹೆದ್ದಾರಿಯಲ್ಲಿ ದಿನಸಿ ಆಹಾರದ ವಾಹನ ತಡೆಯುವ ಕಾಡಾನೆಯ ಫೋಟೊ ಕ್ಲಿಕ್ಕಿಸುವ ಪ್ರಯಾಣಿಕರು

ಮಲ್ಲೇಶ ಎಂ.
Published 10 ಫೆಬ್ರುವರಿ 2025, 7:17 IST
Last Updated 10 ಫೆಬ್ರುವರಿ 2025, 7:17 IST
ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಪೋಟೋ ತೆಗೆಯಲು ವಾಹನದಿಂದ ಇಳಿದಿರುವ ಪ್ರವಾಸಿಗರು
ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಪೋಟೋ ತೆಗೆಯಲು ವಾಹನದಿಂದ ಇಳಿದಿರುವ ಪ್ರವಾಸಿಗರು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಕಾಡಾನೆಯ ಜೊತೆಗೆ ಪ್ರವಾಸಿಗರ ಪುಂಡಾಟ ಹೆಚ್ಚಾಗಿದೆ.

ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಹೆದ್ದಾರಿಯಲ್ಲಿ ತರಕಾರಿ, ಹಣ್ಣು–ಹಂಪಲು ಸಹಿತ ದಿನಸಿ ಆಹಾರ ಪದಾರ್ಥಗಳನ್ನು ಸಾಗಿಸುವ ವಾಹನಗಳನ್ನು ಅಡ್ಡಗಟ್ಟಿ ತಿನ್ನಲು ಕಾಡಾನೆಯೊಂದು ಹೆದ್ದಾರಿಗೆ ಬಂದು ನಿಲ್ಲುತ್ತಿದ್ದು, ಈ ಸಂದರ್ಭ ಪ್ರವಾಸಿಗರು ರಸ್ತೆಯ ಮೇಲೆಯೇ ವಾಹನಗಳನ್ನು ನಿಲ್ಲಿಸಿಕೊಂಡು ಆನೆಗೆ ಕೀಟಲೆ ಮಾಡುವುದನ್ನು ಶುರು ಹಚ್ಚಿಕೊಂಡಿದ್ದಾರೆ.

ಕಾಡಾನೆಯು ರಸ್ತೆಗೆ ಬರುತ್ತಿದಂತೆ ವಾಹನಗಳಿಂದ ಕೆಳಗಿಳಿಯುತ್ತಿರುವ ಪ್ರವಾಸಿಗರು ಆನೆಯ ಬಳಿಗೆ ಹೋಗಿ ಫೋಟೊಗಳನ್ನು ಕ್ಲಿಕ್ಕಿಸುವುದು, ವಿಡಿಯೊಗಳನ್ನು ಚಿತ್ರಿಸುವ ಮೂಲಕ ಆನೆಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ರಸ್ತೆಯ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಕರ್ಕಶವಾಗಿ ಶಬ್ದ ಮಾಡುವ ಮೂಲಕ ಕಾಡಾನೆಗೆ ಕೋಪ ಬರಿಸುವಂತೆ ನಡತೆ ಪ್ರದರ್ಶನ ಮಾಡುತ್ತಿದ್ದಾರೆ. ವಾಹನ ಸವಾರರ ನಡವಳಿಕೆಯಿಂದ ಕೆಲವು ಬಾರಿ ಆನೆಯು ದಾಳಿಗೂ ಮುಂದಾಗಿರುವ ಘಟನೆಗಳು ನಡೆದಿವೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಸವಾರರು ಪಾರಾಗಿದ್ದಾರೆ.

ADVERTISEMENT

ರಜೆ ಹಾಗೂ ವಾರಾಂತ್ಯದಲ್ಲಿ ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದು ಈ ಅವಧಿಯಲ್ಲಿ ಪ್ರವಾಸಿಗರು ಹಾಗೂ ವಾಹನ ಸವಾರರು ಆನೆಯೊಂದಿಗೆ ನಡೆಸುತ್ತಿರುವ ಪುಂಡಾಟ ಹೆಚ್ಚಾಗಿದೆ. ಕಾಡಾನೆಯ ಚಿತ್ರೀಕರಣದ ವಿಡಿಯೊ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ.

ಆನೆಯ ಜೊತೆಗೆ ಕೆಲವು ಪ್ರವಾಸಿಗರು ಹಾಗೂ ಸಾರ್ವಜನಿಕರು ಎಲ್ಲೆ ಮೀರಿ ವರ್ತಿಸುತ್ತಿರುವುದು ಸರಿಯಲ್ಲ. ಇದರಿಂದ ಇತರರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಆನೆ ರಸ್ತೆಗೆ ಬರುವುದರಿಂದಲೂ ಸಮಸ್ಯೆ ಹೆಚ್ಚಾಗುತ್ತಿದೆ. ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಅನೆಯೊಂದಿಗೆ ಪುಂಡಾಟ ನಡೆಸುವವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು, ದಂಡ ವಿಧಿಸಿ ಪ್ರಕರಣ ದಾಖಲಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಪ್ರವಾಸಿಗರು ಇಂತಹ ಹುಚ್ಚುತನ ಪ್ರದರ್ಶನ ಮಾಡದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು, ಕಾನೂನು ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ಹದ್ದುಬಸ್ತಿನಲ್ಲಿಡಬೇಕು ಎಂದು ಪರಿಸರ ಪ್ರೇಮಿ ಜೋಸೆಫ್ ಹೂವರ್ ಒತ್ತಾಯಿಸಿದ್ದಾರೆ.

ಕಳೆದ ವಾರವೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗೆ ಕಿಟಲೆ ಮಾಡಲಾಗಿದೆ. ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ಪ್ರವಾಸಿಗರು ಅನುಚಿತವಾಗಿ ವರ್ತಿಸದಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು, ಸಿಬ್ಬಂದಿ ಗಸ್ತು ಹೆಚ್ಚಿಸಬೇಕು. ಆನೆಯನ್ನು ದೂರದ ಸ್ಥಳಕ್ಕೆ ಓಡಿಸಬೇಕು ಎಂದು ಅವರು ಒತ್ತಾಯಿಸಿದರು.

ದೂರ ಓಡಿಸಿದರೂ ಆನೆ ವಾಪಸ್‌
ಹೆದ್ದಾರಿಗೆ ಬಂದು ತರಕಾರಿ ಹಣ್ಣುಗಳ ವಾಹನಗಳನ್ನು ತಡೆಯುತ್ತಿರುವ ಕಾಡಾನೆಯನ್ನು ದೂರಕ್ಕೆ ಓಡಿಸಿದರೂ ಮತ್ತೆ ರಸ್ತೆಗೆ ಬರುತ್ತಿದೆ. ತಮಿಳುನಾಡಿನ ಗಡಿಯವರೆಗೆ ಓಡಿಸಿದರೂ ಪ್ರಯೋಜನವಾಗಿಲ್ಲ. ಆನೆಯನ್ನು ಸೆರೆ ಹಿಡಿಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಎಸಿಎಫ್ ನವೀನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.