ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ನೇರಿಗೆಡೆ ಕಾಡಿನಲ್ಲಿ ಜೇನು ಸಂಗ್ರಹಣೆ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಕರಡಿ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.
ಬಿಳಿಗಿರಿಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ರಂಗೇಗೌಡ ಎಂಬುವರ ಮಗ ಸಿದ್ದ (30) ಮೃತಪಟ್ಟವರು. ಇವರು ಜೇನು ಸಂಗ್ರಹಣೆ ಮಾಡಲು ಕಾಡಿಗೆ ತೆರಳಿದ್ದರು. ಈ ಸಮಯದಲ್ಲಿ ಕರಡಿ ದಾಳಿ ಮಾಡಿ ಮುಖ ಮತ್ತು ಕಾಲನ್ನು ಬಗೆದು ಗಾಯಗೊಳಿಸಿದೆ. ದೂರದಲ್ಲಿ ಇದ್ದ ಶ್ರಮಿಕರು ಹತ್ತಿರ ಬರುವ ವೇಳೆಗಾಗಲೇ ಸಿದ್ದ ರಕ್ತ ಸ್ರಾವದಿಂದ ಸ್ಥಳದಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.
ಪತ್ನಿ ಮೂರು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. 3 ವರ್ಷದ ಮಗಳನ್ನು ಸಾಕುತ್ತಿದ್ದ ಸಿದ್ದ ಶ್ರಮ ಜೀವಿಯಾಗಿದ್ದ. ಈಗ ಮಗು ತಬ್ಬುಲಿಯಾಗಿದ್ದು, ದಿಕ್ಕು ತೋಚದಂತೆ ಆಗಿದೆ ಎಂದು ಸಂಬಂಧಿಕರು ರೋದಿಸಿದರು. ಅರಣ್ಯ ಅಧಿಕಾರಿಗಳು ಹಾಗೂ ಸೋಲಿಗ ಮುಖಂಡರು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.